ಅಕ್ರಮ ಮರಳುಗಾರಿಕೆ ಪ್ರಕರಣ: ಸಿಎಂ ಚರಂಜಿತ್ ಚನ್ನಿ ಸೋದರಳಿಯ ಭೂಪಿಂದರ್ ಹನಿಗೆ 14 ದಿನ ನ್ಯಾಯಾಂಗ ಬಂಧನ!
ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯನಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.
Published: 11th February 2022 04:52 PM | Last Updated: 11th February 2022 04:52 PM | A+A A-

ಭೂಪಿಂದರ್ ಸಿಂಗ್ ಹನಿ
ಚಂಡೀಗಡ: ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯನಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.
ಇದಕ್ಕೂ ಮುನ್ನ ಸ್ಥಳೀಯ ನ್ಯಾಯಾಲಯವು ಭೂಪಿಂದರ್ ಸಿಂಗ್ ಅಲಿಯಾಸ್ ಹನಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫೆಬ್ರವರಿ 11ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಿತ್ತು. ಈ ಪ್ರಕರಣವು ಪಂಜಾಬ್ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಾಗಿದೆ.
ಫೆಬ್ರವರಿ 3ರಂದು ಕೇಂದ್ರ ತನಿಖಾ ಸಂಸ್ಥೆ ಹನಿಯನ್ನು ಬಂಧಿಸಿತ್ತು. ಅಲ್ಲಿಂದ ಮಂಗಳವಾರದವರೆಗೆ ಇಡಿ ಕಸ್ಟಡಿಯಲ್ಲಿದ್ದ ಹನಿಯ ಕಸ್ಟಡಿ ಅವಧಿ ಮುಗಿದ ನಂತರ ಆತನನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಇಂದು ನಡೆದ ವಿಚಾರಣೆಯಲ್ಲಿ ಹನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಸ್ಟಡಿಯನ್ನು ವಿಸ್ತರಿಸುವಂತೆ ಇಡಿ ಕೋರಿತ್ತು.
ಈ ಹಿಂದೆ ಮರಳು ಗಣಿಗಾರಿಕೆ ಹಾಗೂ ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆಯಲ್ಲಿ ಸಹಾಯ ಮಾಡಿದ್ದಕ್ಕಾಗಿ 10 ಕೋಟಿ ರೂಪಾಯಿ ನಗದು ಪಡೆದಿರುವುದಾಗಿ ಹನಿ ತಪ್ಪೊಪ್ಪಿಕೊಂಡಿದ್ದರು. ಸೋಮವಾರ ನೀಡಿದ ಹೇಳಿಕೆಯಲ್ಲಿ ಇಡಿ ಈ ಬಗ್ಗೆ ಹೇಳಿಕೊಂಡಿದೆ. ಜನವರಿ 18 ರಂದು, ತನಿಖಾ ಸಂಸ್ಥೆ ಹನಿ ಮತ್ತು ಇತರರ ವಿರುದ್ಧ ದಾಳಿ ನಡೆಸಿತ್ತು. ಈ ವೇಳೆ ಹನಿ ಇರುವಲ್ಲಿಂದ ಸುಮಾರು 7.9 ಕೋಟಿ ರೂ., ಆತನೊಂದಿಗೆ ಸಂಬಂಧ ಹೊಂದಿದ್ದ ಸಂದೀಪ್ ಕುಮಾರ್ ಎಂಬುವವರ ಜಾಗದಿಂದ ಸುಮಾರು ಎರಡು ಕೋಟಿ ರೂ. ವಶಪಡಿಸಿಕೊಂಡಿತ್ತು.