‘ಒಳ್ಳೆಯ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ’ – ಕಾಶ್ಮೀರ ವಿದ್ಯಾರ್ಥಿನಿ ಅರೂಸಾ ಪರ್ವೇಜ್
ಕರ್ನಾಟಕದಲ್ಲಿ ಹಿಜಾಬ್ನಿಂದಾಗಿ ಉದ್ಭವಿಸಿರುವ ವಿವಾದವು ಜಮ್ಮು ಮತ್ತು ಕಾಶ್ಮೀರಕ್ಕೂ ಕಾಲಿಟ್ಟಿದೆ. ಶ್ರೀನಗರ ಮೂಲದ 12 ನೇ ತರಗತಿ ಟಾಪರ್ ಅರೂಸಾ ಪರ್ವೇಜ್ ‘ಹಿಜಾಬ್’ ಧರಿಸದೇ ಇರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ.
Published: 13th February 2022 10:12 PM | Last Updated: 13th February 2022 10:12 PM | A+A A-

ಹಿಜಾಬ್ (ಸಂಗ್ರಹ ಚಿತ್ರ)
ಶ್ರೀನಗರ: ಕರ್ನಾಟಕದಲ್ಲಿ ಹಿಜಾಬ್ನಿಂದಾಗಿ ಉದ್ಭವಿಸಿರುವ ವಿವಾದವು ಜಮ್ಮು ಮತ್ತು ಕಾಶ್ಮೀರಕ್ಕೂ ಕಾಲಿಟ್ಟಿದೆ. ಶ್ರೀನಗರ ಮೂಲದ 12 ನೇ ತರಗತಿ ಟಾಪರ್ ಅರೂಸಾ ಪರ್ವೇಜ್ ‘ಹಿಜಾಬ್’ ಧರಿಸದೇ ಇರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ. ಆದರೆ ಟ್ರೋಲರ್ಗಳಿಗೆ ದಿಟ್ಟ ಉತ್ತರ ನೀಡಿರುವ ಅರುಸಾ ಪರ್ವೇಜ್, ತಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಅರುಸಾ ಹೇಳಿದ್ದಾರೆ.
ಇತ್ತೀಚೆಗೆ ಅರುಸಾ ಅವರು 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದರಿಂದ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಶನಿವಾರ ಬೆಳಗ್ಗೆಯಿಂದಲೇ ಅರುಸಾ ಪರ್ವೇಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಆರಂಭವಾಯಿತು. ಒಂದೆಡೆ ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಅರುಸಾ ಅವರನ್ನು ಅಭಿನಂದಿಸುತ್ತಿದ್ದರೆ, ಮತ್ತೊಂದೆಡೆ ಕೆಲವರು ಹಿಜಾಬ್ ಧರಿಸಿಲ್ಲ ಎಂದು ಟೀಕಿಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಇಲಾಹಿಬಾಗ್ ಪ್ರದೇಶದ ನಿವಾಸಿ ಅರುಸಾ ಅವರು ವಿಜ್ಞಾನ ವಿಭಾಗದಲ್ಲಿ 500 ರಲ್ಲಿ 499 ಅಂಕಗಳನ್ನು ಗಳಿಸಿದ್ದಾರೆ. ಶ್ರೀನಗರ ಜಿಲ್ಲಾಧಿಕಾರಿ ಮೊಹಮ್ಮದ್ ಎಜಾಜ್ ಅಸದ್ ಅವರು ಅರುಸಾ ಅವರನ್ನು ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದಿದ್ದರಿಂದ ಸನ್ಮಾನಿಸಿದರು.
ಇದಾದ ಬಳಿಕ ಟ್ರೋಲರ್ಗಳು ಅರುಸಾ ಅವರು ‘ಹಿಜಾಬ್’ ಧರಿಸಿಲ್ಲ ಎಂದು ಆನ್ಲೈನ್ನಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದರು. ಈ ಬಗ್ಗೆ ಅರುಸಾ ಅವರು “ನಾನು ಅಲ್ಲಾನಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದರು. ನಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ನಾನು ಹಿಜಾಬ್ ಧರಿಸುವ ಅಗತ್ಯವಿಲ್ಲ. ಆನ್ಲೈನ್ ಟ್ರೋಲಿಂಗ್ನಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ಈ ಕಾಮೆಂಟ್ಗಳಿಂದ ನನ್ನ ಪೋಷಕರು ತುಂಬಾ ಆತಂಕಕ್ಕೊಳಗಾಗಿರುವುದು ನನ್ನ ಅಸಮಾಧಾನಕ್ಕೆ ಕಾರಣ” ಎಂದು ಅವರು ಹೇಳಿದ್ದಾರೆ.