ಹಿಜಾಬ್ ವಿವಾದ: ಧಾರ್ಮಿಕ ಭಾವನೆ ಮತ್ತು ಸಂವಿಧಾನವನ್ನು ಗೌರವಿಸಿ ಎಂದ ಜಮ್ಮು, ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್
ಕರ್ನಾಟಕದ ಹಿಜಾಬ್ ವಿವಾದ ದೇಶಾದ್ಯಂತ ವ್ಯಾಪಿಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕರು ಇತರರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಮತ್ತು ಸಂವಿಧಾನವನ್ನು ಸರ್ವೋಚ್ಚ ಸ್ಥಾನದಲ್ಲಿಡಬೇಕು...
Published: 13th February 2022 12:20 PM | Last Updated: 13th February 2022 12:20 PM | A+A A-

ಮನೋಜ್ ಸಿನ್ಹಾ
ಜಮ್ಮು: ಕರ್ನಾಟಕದ ಹಿಜಾಬ್ ವಿವಾದ ದೇಶಾದ್ಯಂತ ವ್ಯಾಪಿಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕರು ಇತರರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಮತ್ತು ಸಂವಿಧಾನವನ್ನು ಸರ್ವೋಚ್ಚ ಸ್ಥಾನದಲ್ಲಿಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಹಿಜಾಬ್ ವಿವಾದದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿನ್ಹಾ, "ನಾನು ಎರಡು ವಿಷಯಗಳ ಬಗ್ಗೆ ಮಾತನಾಡಬೇಕಾಗಿದೆ - ಒಂದು ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಮತ್ತು ಭಾರತೀಯ ಸಂವಿಧಾನವನ್ನು ಪರಮೋಚ್ಛವಾಗಿ ಪರಿಗಣಿಸಬೇಕು. ದೇಶದ ಪ್ರತಿಯೊಬ್ಬ ನಾಗರಿಕರು ಈ ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದಿದ್ದಾರೆ.
ಇದನ್ನು ಓದಿ: ಹಿಜಾಬ್ ವಿವಾದ ಒಂದು ಪಿತೂರಿ: ಕೇರಳ ರಾಜ್ಯಪಾಲ ಆರಿಫ್ ಖಾನ್
ಹಿಜಾಬ್ ವಿವಾದ ನ್ಯಾಯಾಲಯದಲ್ಲಿರುವುದರಿಂದ "ಈ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ" ಎಂದು ಅವರು ಸಿನ್ಹಾ ಹೇಳಿದ್ದಾರೆ.
ಶ್ರೀನಗರದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಆಸಿಡ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾವು ಅವರ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಹುಡುಗಿ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಹಿರಿಯ ಅಧಿಕಾರಿಯೊಬ್ಬರು ಸಹ ಅಲ್ಲಿದ್ದಾರೆ. ನಾನು ಅವರ ಆರೋಗ್ಯದ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿನ್ಹಾ ತಿಳಿಸಿದ್ದಾರೆ.
ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ವರದಿಯ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಗವರ್ನರ್, ಭಾರತದ ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಮತ್ತು ಪಾರದರ್ಶಕ ಹಾಗೂ ವೈಜ್ಞಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಯಾವುದೇ ತಪ್ಪು ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದಾರೆ.