'ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ': ಕಾಂಗ್ರೆಸ್ ಬಿಟ್ಟು 2024 ಚುನಾವಣೆ ತಯಾರಿ ಬಗ್ಗೆ ದೀದಿ ಮಾತು
ಪಶ್ಚಿಮ ಬಂಗಾಳದ ನಾಲ್ಕು ಪುರಸಭೆ ಕಾರ್ಪೊರೇಷನ್ ಗಳಲ್ಲಿ ಫೆ.12 ರಂದು ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಒಲವು ತೋರಿರುವ ಜನತೆಗೆ ಸಿಎಂ ಮಮತಾ ಬ್ಯಾನರ್ಜಿ ಧನ್ಯವಾದ ತಿಳಿಸಿದ್ದಾರೆ.
Published: 14th February 2022 01:59 PM | Last Updated: 14th February 2022 01:59 PM | A+A A-

ಮಮತಾ ಬ್ಯಾನರ್ಜಿ
ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಲ್ಕು ಪುರಸಭೆ ಕಾರ್ಪೊರೇಷನ್ ಗಳಲ್ಲಿ ಫೆ.12 ರಂದು ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಒಲವು ತೋರಿರುವ ಜನತೆಗೆ ಸಿಎಂ ಮಮತಾ ಬ್ಯಾನರ್ಜಿ ಧನ್ಯವಾದ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಜನಸಾಮಾನ್ಯರಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಳೆದ ವಾರ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಪರ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ತಮ್ಮ ಪಕ್ಷ ರಾಜ್ಯದಲ್ಲಿ ದೂರದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿತು. ಅಖಿಲೇಶ್ ಯಾದವ್ (ಎಸ್ ಪಿ ಮುಖ್ಯಸ್ಥ) ಯಾವುದೇ ಕ್ಷೇತ್ರದಲ್ಲಿಯೂ ಹಿನ್ನೆಡೆ ಎದುರಿಸಬಾರದು ಎಂಬ ಕಾರಣಕ್ಕಾಗಿ ನಾವು ರಾಜ್ಯದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿಲ್ಲ. ಮೊದಲ ಹಂತದಲ್ಲಿ ಅಖಿಲೇಶ್ ಅವರ ಪಕ್ಷ 37 ರಿಂದ 57 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾ.03 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ವಾರಣಾಸಿಯಲ್ಲಿ ರ್ಯಾಲಿ ನಡೆಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ದೀದಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಪ್ರಾದೇಶಿಕ ಪಕ್ಷಗಳೂ ಮೈತ್ರಿಯನ್ನು, ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿಲ್ಲ. ಕಾಂಗ್ರೆಸ್ ದಾರಿ ಕಾಂಗ್ರೆಸ್ ಗೆ ನಮ್ಮ ದಾರಿ ನಮಗೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದ ಸಂವಿಧಾನ ಹಾನಿಗೊಳಗಾಗುತ್ತಿದೆ. "ನಾನು ತಮಿಳುನಾಡಿ ಸಿಎಂ ಎಂ. ಕೆ ಸ್ಟ್ಯಾಲಿನ್ ಹಾಗೂ ತೆಲಂಗಾಣ ಸಿಎಂ ಕೆಸಿಆರ್ ಅವರೊಂದಿಗೆ ಮಾತನಾಡಿದ್ದೇನೆ ಜೊತೆಯಾಗಿ ನಾವು ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಲು ಯತ್ನಿಸುತ್ತಿದ್ದೇವೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ದೊಡ್ಡ ಮಟ್ಟದ ಉದ್ದೇಶಕ್ಕಾಗಿ ಕೈ ಜೋಡಿಸುವಂತೆ ಸಿಪಿಐ(ಎಂ) ಹಾಗೂ ಕಾಂಗ್ರೆಸ್ ನ್ನೂ ಮನವಿ ಮಾಡಿದ್ದೆ. ಆದರೆ ಅವರು ಮಾತು ಕೇಳಲಿಲ್ಲ. ಈಗ ನಾನೇನು ಮಾಡುವುದಕ್ಕೆ ಸಾಧ್ಯವಿಲ್ಲ. ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷ ಇಲ್ಲ" ಎಂದು ದೀದಿ ಹೇಳಿದ್ದಾರೆ.