
ಯೋಗಿ ಆದಿತ್ಯನಾಥ್
ಲಖನೌ: ಉತ್ತರ ಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಚರ್ಚೆಗೆ ಗ್ರಾಸವಾಗುವಂತಹ ಹೇಳಿಕೆ ನೀಡಿದ್ದಾರೆ. "300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಈ ಚುನಾವಣೆ ಶೇ.80 ರಷ್ಟು ಪ್ರಗತಿಪರತೆ ಹಾಗೂ ಎಲ್ಲವನ್ನೂ ವಿರೋಧಿಸುವ ಶೇ.20 ರಷ್ಟು ನಕಾರಾತ್ಮಕತೆಯನ್ನು ಬಯಸುವ ಜನರ ನಡುವಿನ ಸಂಘರ್ಷವಾಗಿದೆ" ಎಂದು ಹೇಳಿದ್ದಾರೆ.
ಮೊದಲ ಹಂತದ ಮತದಾನ ನಡೆದ ಬಳಿಕ ಎಎನ್ಐ ಗೆ ಸಂದರ್ಶನ ನೀಡಿರುವ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹಾಗೂ ರಾಜ್ಯದ ಜನತೆಯ ಆಶೀರ್ವಾದದೊಂದಿಗೆ ಡಬಲ್ ಇಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಚುನಾವಣೆ 80vs20 ದಿಕ್ಕನ್ನು ಪಡೆದುಕೊಂಡಿದೆ. ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಎಲ್ಲರೂ ಅಸಮಾಧಾನಗೊಂಡಿದ್ದು ಮೊದಲ ಹಂತದ ಚುನಾವಣೆ ಬಳಿಕ ಹಿಂದೇಟು ಹಾಕುತ್ತಿದ್ದಾರೆ" ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ಪ್ರಾರಂಭವಾಗಿದೆ.