ಉಕ್ರೇನ್: ರಷ್ಯಾ ಆಕ್ರಮಣದ ನಡುವೆ ಆಹಾರ, ನೀರು, ಹಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳ ಪರದಾಟ!
ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಹಾರ, ನೀರು ಮತ್ತು ಹಣಕ್ಕಾಗಿ ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.
Published: 25th February 2022 09:05 AM | Last Updated: 25th February 2022 01:10 PM | A+A A-

ಭಾರತೀಯ ವಿದ್ಯಾರ್ಥಿಗಳು
ಅಹಮದಾಬಾದ್/ ನವದೆಹಲಿ: ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಹಾರ, ನೀರು ಮತ್ತು ಹಣಕ್ಕಾಗಿ ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಸ್ವದೇಶಕ್ಕೆ ಮರಳಲು ಯೋಚಿಸುತ್ತಿದ್ದ ಅವರು ವಿಮಾನ ಹತ್ತುವ ಭರವಸೆಯಲ್ಲಿದ್ದರು. ಆದರೆ, ಯುದ್ಧ ಆರಂಭವಾಗುತ್ತಿದ್ದಂತೆ ಉಕ್ರೇನ್ನ ವಾಯುಪ್ರದೇಶವನ್ನು ಮುಚ್ಚಲಾಗಿದೆ.
ದಿನಸಿ ಅಂಗಡಿಗಳು, ಮಾಲ್ ಗಳು ತೆರೆಯದ ಹಿನ್ನೆಲೆಯಲ್ಲಿ ಆಹಾರ ವಸ್ತು ಖರೀದಿಗೆ ತೊಂದರೆಯಾಗಿದೆ. ಎಟಿಎಂಗಳು ಕೂಡಾ ಕಾರ್ಯನಿರ್ವಹಿಸದೆ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ದುಃಸ್ವಪ್ನದ ಅನುಭವವಾಗುತ್ತಿದೆ. ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ನಾವು ಸ್ವದೇಶಕ್ಕೆ ಮರಳುವ ಯೋಚನೆಯಲ್ಲಿದ್ದೇವು, ನಮ್ಮ ಬಳಿಯಿದ್ದ ಎಲ್ಲಾ ಆಹಾರ ಪದಾರ್ಥಗಳು ಖಾಲಿಯಾಗಿವೆ. ಈಗ ಆಹಾರಕ್ಕಾಗಿ ತೊಂದರೆಯಾಗಿದೆ. ಬಹುತೇಕ ದಿನಸಿ ಅಂಗಡಿಗಳು ಖಾಲಿಯಾಗಿವೆ, ರಾಯಭಾರಿ ಅಧಿಕಾರಿಗಳನ್ನು ಸಂಪರ್ಕಿಸುತ್ತಿರುವುದಾಗಿ ಅಹಮದಾಬಾದಿನ ವಿದ್ಯಾರ್ಥಿನಿ ಜಾಹ್ನವಿ ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧ: ಮೊದಲ ದಿನವೇ ಉಕ್ರೇನ್ ಸೈನಿಕರು, ನಾಗರಿಕರು ಸೇರಿ 137 ಮಂದಿ ಸಾವು, ನೂರಾರು ಮಂದಿಗೆ ಗಾಯ
ಶಾಪಿಂಗ್ ಮಾಲ್ ಗಳಿಗೆ ಜನರು ನುಗ್ಗುತ್ತಿದ್ದಾರೆ. ಯಾವಾಗ ಈ ಪರಿಸ್ಥಿತಿ ಅಂತ್ಯವಾಗುತ್ತದೆ ಎಂಬುದು ಗೊತ್ತಿಲ್ಲ, ಎಲ್ಲರೂ ಎಲ್ಲವನ್ನೂ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅಹಮದಾಬಾದಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ದ್ರಷ್ಟಿ ನವ್ಲೆ ತಿಳಿಸಿದ್ದಾರೆ. ಇಂಟರ್ ನೆಟ್, ಎಟಿಎಂ, ಬ್ಯಾಂಕಿಂಗ್ ಸೇವೆ ಎಲ್ಲವೂ ಸೇವೆ ಸ್ಥಗಿತಗೊಳಿಸಿವೆ, ಸ್ಥಳೀಯ ಸಾರಿಗೆ ವ್ಯವಸ್ಥೆಯೂ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಬಸ್ ಅಥವಾ ರೈಲಿಗೆ ಬುಕ್ ಮಾಡದಂತಾಗಿದೆ ಎಂದು ಒಡಿಶಾದ 25 ವರ್ಷದ ವಿದ್ಯಾರ್ಥಿನಿಯೊಬ್ಬಳು ಹೇಳಿಕೊಂಡಿದ್ದಾರೆ.
ಕುಡಿಯುವ ನೀರಿಗೂ ತೊಂದರೆಯಾಗಿದೆ. ಜನರು ಇಲ್ಲಿ ನಲ್ಲಿ ನೀರನ್ನು ಕುಡಿಯುವುದಿಲ್ಲ, ಏಕೆಂದರೆ ಅದು ಹೆಚ್ಚು ಕಲುಷಿತವಾಗಿದೆ. ನಾವೆಲ್ಲರೂ ಡಿಸ್ಪೆನ್ಸರ್ಗಳಿಂದ ನೀರನ್ನು ಖರೀದಿಸುತ್ತೇವೆ. ಇತರರಂತೆ, ನಾನು ಕೂಡ ಆಹಾರವನ್ನು ಖರೀದಿಸಲು ಹೆಣಗಾಡಿದೆ ಮತ್ತು ಬಹಳ ಸಮಯದ ನಂತರ ಕೆಲವು ಒಣ ಆಹಾರ ಪದಾರ್ಥಗಳನ್ನು ಖರೀದಿಸಿದ್ದಾಗಿ 26 ವರ್ಷದ ಔಸಾಫ್ ಹುಸೇನ್ ತಿಳಿಸಿದ್ದಾರೆ.