
(ಸಾಂಕೇತಿಕ ಚಿತ್ರ)
ಅಗರ್ತಲಾ: ಮಿಜೊರಾಮ್ ಪೊಲೀಸರು ತ್ರಿಪುರಾ ಮೂಲದ ತಂದೆ-ಮಗನ ಮೇಲೆ ಗುಂಡು ಹಾರಿಸಿದ್ದಾರೆ.
ನೆರೆ ರಾಜ್ಯಕ್ಕೆ ಜುಮ್ ಕೃಷಿಗಾಗಿ ತಂದೆ-ಮಗ ಇಬ್ಬರೂ ಬಂದಿದ್ದರು. ಜಿಲ್ಲಾ ಎಸ್ ಪಿ ಭಾನುಪಾದ ಚಕ್ರವರ್ತಿ ನೀಡಿರುವ ಮಾಹಿತಿಯ ಪ್ರಕಾರ, ರಾಮುಹೈ ರಿಯಾಂಗ್ ಹಾಗೂ ಆತನ ಪುತ್ರ ರತೀಂದ್ರ ಕಾಂಚನಪುರದ ಉಪವಿಭಾಗದ ಸ್ಥಳೀಯರೊಂದಿಗೆ ನೆರೆ ರಾಜ್ಯಕ್ಕೆ ಕೃಷಿಗಾಗಿ ಆಗಮಿಸಿದ್ದರು.
ಶುಕ್ರವಾರದಂದು ಮಧ್ಯಾಹ್ನ ಮಿಜೊರಾಮ್ ಪೊಲೀಸರು ತಂದೆ ಹಾಗೂ ಮಗನ ಮೇಲೆ ಗುಂಡು ಹಾರಿಸಿದ್ದು, ಇಬ್ಬರಿಗೂ ತೀವ್ರ ಗಾಯಗಳಾಗಿದೆ. ಕಾರಣಗಳು ಇನ್ನೂ ಅಸ್ಪಷ್ಟವಾಗಿವೆ ಎಂದು ತಿಳಿದುಬಂದಿದೆ. ಇಬ್ಬರೂ ಮಿಜೊರಾಮ್ ಗೆ ಡ್ರಗ್ಸ್ ನೊಂದಿಗೆ ಪ್ರವೇಶಿಸಿದ್ದರು ಎಂದು ಮಿಜೊರಾಮ್ ಪೊಲೀಸರು ಹೇಳಿದ್ದಾರೆ.
ರಾಮುಹೈ ರಿಯಾಂಗ್ ಪರಾರಿಯಾಗಿ ವಾಪಸ್ ತ್ರಿಪುರಾ ಸೇರಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆತನ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳು ಯುವಕ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಧರ್ಮನಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಆರೋಗ್ಯ ಸ್ಥಿರವಾಗಿದೆ ಎಂದು ಎಸ್ ಪಿ ಹೇಳಿದ್ದಾರೆ. ವಾಂಗ್ಮುನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂತರಾಜ್ಯ ಗಡಿಗಳಿಗೆ ಹೆಚ್ಚಿನ ಪಡೆಯನ್ನು ರವಾನಿಸಲಾಗಿದೆ.