ಆಂಧ್ರ ಪ್ರದೇಶ: ಪೊಲೀಸರ ಸೋಗಿನಲ್ಲಿ ಬುಡಕಟ್ಟು ಯುವತಿಯರ ಮೇಲೆ ಅತ್ಯಾಚಾರ; ವ್ಯಕ್ತಿ ಬಂಧನ
ಪೊಲೀಸರ ಸೋಗಿನಲ್ಲಿ ಇಬ್ಬರು ಬುಡಕಟ್ಟು ಯುವತಿಯರ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಆಂಧ್ರಪ್ರದೇಶದ ವಿಜಿಯನಗರಮ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
Published: 03rd January 2022 08:32 PM | Last Updated: 03rd January 2022 08:32 PM | A+A A-

ರೇಪ್
ವಿಜಯನಗರಮ್: ಪೊಲೀಸರ ಸೋಗಿನಲ್ಲಿ ಇಬ್ಬರು ಬುಡಕಟ್ಟು ಯುವತಿಯರ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಆಂಧ್ರಪ್ರದೇಶದ ವಿಜಿಯನಗರಮ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವಿಜಿಯನಗರಮ್ ಜಿಲ್ಲೆಯಲ್ಲಿ ಹೊಸ ವರ್ಷದಂದು ಈ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿ ಎಂಬ ಸೋಗಿನಲ್ಲಿ ಇಬ್ಬರು ಬುಡಕಟ್ಟು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ರಾಂಬಾಬು ಎಂದು ಗುರುತಿಸಲಾಗಿದ್ದು, ಪೊಲೀಸ್ ಅಧಿಕಾರಿಯಂತೆ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.
ಇಬ್ಬರು ಯುವತಿಯರು ಹೊಸ ವರ್ಷಾಚರಣೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ್ದಾನೆ. ಇಬ್ಬರು ಯುವತಿಯರು ನೀಡಿದ ದೂರಿನನ್ವಯ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ಹುಡುಗಿಯರು ತಮ್ಮ ಸ್ನೇಹಿತನೊಂದಿಗೆ ವಟ್ಟಿಗೆದ್ದ ಜಲಾಶಯಕ್ಕೆ ಪಿಕ್ನಿಕ್ ಎಂದು ತೆರಳಿ ತಮ್ಮ ಹಾಸ್ಟೆಲ್ಗೆ ಹಿಂತಿರುಗುತ್ತಿದ್ದಾಗ ಆರೋಪಿ ರಾಂಬಾಬು ಪೊಲೀಸ್ ಅಧಿಕಾರಿಯಂತೆ ನಟಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಈತ ಈ ವಿಚಾರವನ್ನು ಬಹಿರಂಗಪಡಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು ಎಂದು ತಿಳಿದು ಬಂದಿದೆ.
ಸಂತ್ರಸ್ತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ದೀಪಿಕಾ ತಿಳಿಸಿದ್ದಾರೆ. ಆರೋಪಿ ವಿರುದ್ಧ 13 ಪ್ರಕರಣಗಳು ದಾಖಲಾಗಿವೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 506 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.