ಕುಡಿದು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಾನೆಂದು ಹಿಗ್ಗಾಮುಗ್ಗ ಥಳಿಸಿದ ರೈಲ್ವೆ ಪೊಲೀಸ್: ವಿಡಿಯೊ ಸೆರೆ, ತನಿಖೆಗೆ ಆದೇಶ
ಟಿಕೆಟ್ ಪಡೆಯದೆ ಪಾನಮತ್ತನಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆ ಎಂದು ಕೇರಳದ ಕಣ್ಣೂರಿನ ರೈಲ್ವೆ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಥಳಿಸಿದ ಘಟನೆ ನಡೆದಿದ್ದು ವೀಡಿಯೊ ವೈರಲ್ ಆಗಿದೆ.
Published: 03rd January 2022 02:00 PM | Last Updated: 03rd January 2022 02:00 PM | A+A A-

ಪ್ರಯಾಣಿಕನಿಗೆ ರೈಲ್ವೆ ಎಎಸ್ ಐ ಹೊಡೆಯುತ್ತಿರುವ ದೃಶ್ಯ
ಕೋಝಿಕ್ಕೋಡು: ಟಿಕೆಟ್ ಪಡೆಯದೆ ಪಾನಮತ್ತನಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾನೆ ಎಂದು ಕೇರಳದ ಕಣ್ಣೂರಿನ ರೈಲ್ವೆ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಥಳಿಸಿದ ಘಟನೆ ನಡೆದಿದ್ದು ವೀಡಿಯೊ ವೈರಲ್ ಆಗಿದೆ.
ಮಂಗಳೂರು ಕೇಂದ್ರ-ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್ಪ್ರೆಸ್ (16603) ಎರಡನೇ ದರ್ಜೆಯ ಸ್ಲೀಪರ್ ಕೋಚ್ನಲ್ಲಿ ಮೊನ್ನೆ ಭಾನುವಾರ ರಾತ್ರಿ ಕಣ್ಣೂರು ಮತ್ತು ವಡಕರ ರೈಲು ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ. ಎಎಸ್ ಐ ತನ್ನ ಬೂಟಿನಿಂದ ಪ್ರಯಾಣಿಕನನ್ನು ಅಮಾನುಷವಾಗಿ ಒದೆಯುವ ವಿಡಿಯೋ ಇನ್ನೊಬ್ಬ ಪ್ರಯಾಣಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ತನಿಖೆಗೆ ಕಣ್ಣೂರು ನಗರ ಪೊಲೀಸ್ ಕಮಿಷನರ್ ಆರ್ ಇಳಂಗೋ ಅವರು ವಿಶೇಷ ಶಾಖೆಯ ಎಸಿಪಿ ಅವರನ್ನು ನಿಯೋಜಿಸಿದ್ದಾರೆ.
ದೃಶ್ಯಗಳನ್ನು ಚಿತ್ರೀಕರಿಸಿದ ಪ್ರಯಾಣಿಕ ಹೇಳುವ ಪ್ರಕಾರ, ಏಟು ತಿಂದ ಪ್ರಯಾಣಿಕ ಸಹ ಪ್ರಯಾಣಿಕರಿಗೆ ಏನೂ ತೊಂದರೆ ಮಾಡುತ್ತಿರಲಿಲ್ಲ, ತನ್ನ ಪಾಡಿಗೆ ಕುಳಿತಿದ್ದ. ಎಎಸ್ಐ ಮತ್ತು ಇನ್ನೊಬ್ಬ ಪೋಲೀಸ್ ಬಂದು ಪ್ರಯಾಣಿಕನಲ್ಲಿ ಟಿಕೆಟ್ ಕೇಳಿದಾಗ ಅವನು ಟಿಕೆಟ್ಗಾಗಿ ಹುಡುಕಾಡಲಾರಂಭಿಸಿದ.
ಆಗ ಪೊಲೀಸ್ ಹಿಂದೆಮುಂದೆ ನೋಡದೆ ಒದೆಯಲು, ಹೊಡೆಯಲು ಆರಂಭಿಸಿದರು. ಎದೆಗೆ ಸರಿಯಾಗಿ ಒದ್ದರು, ಆಗ ಪ್ರಯಾಣಿಕ ರೈಲಿನ ನೆಲದ ಮೇಲೆ ಬಿದ್ದನು, ನಾನು ಮೇಲೆ ಕುಳಿತುಕೊಂಡು ವಿಡಿಯೊ ಮಾಡುತ್ತಿದ್ದೆ. ನಂತರ ಟ್ರೈನ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಕೂಡ ಸೇರಿಕೊಂಡರು. ಪ್ರಯಾಣಿಕರಲ್ಲಿ ಟಿಕೆಟ್ ಕೇಳುವ ಅಧಿಕಾರ ಟಿಟಿಇಗೆ ಇದೆಯೇ ಹೊರತು ಪೊಲೀಸ್ ಗೆ ಇಲ್ಲ. ನಾನು ವಿಡಿಯೊ ಮಾಡುತ್ತಿರುವುದನ್ನು ಕಂಡು ನನ್ನಲ್ಲಿ ಟಿಕೆಟ್ ತೋರಿಸುವಂತೆ ಎಎಸ್ ಐ ಕೇಳಿದರು. ಆಗ ನಾನು ಟಿಟಿಇಗೆ ಮಾತ್ರ ತೋರಿಸುತ್ತೇನೆ ಎಂದೆ. ಕೊನೆಗೆ ಏಟು ತಿಂದ ಪ್ರಯಾಣಿಕನನ್ನು ವಡಕರದಲ್ಲಿ ರೈಲಿನಿಂದ ಇಳಿಸಲಾಯಿತು.
ಎಎಸ್ ಐ ಹೇಳುವುದೇನು?: ನಾನು ಪ್ರಯಾಣಿಕನಿಗೆ ಹೊಡೆಯಲಿಲ್ಲ ಅಥವಾ ಒದೆಯಲಿಲ್ಲ, ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕೆ ಕೆಳಗಿಳಿಯುವಂತೆ ಹೇಳಿದೆ ಎನ್ನುತ್ತಾರೆ. ಆದರೆ ಪೊಲೀಸರು ಈ ಬಗ್ಗೆ ರೈಲ್ವೆ ಪೊಲೀಸ್ ಗಾಗಲಿ ತಿಳಿಸಲಿಲ್ಲ, ಅಥವಾ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಕೇಸು ಹಾಕಲಿಲ್ಲ. ದಂಡ ಹಾಕಲಿಲ್ಲ, ಆತ ಮದ್ಯ ಸೇವಿಸಿದ್ದನೇ ಎಂದು ನೋಡಲು ಮೆಡಿಕಲ್ ಟೆಸ್ಟ್ ಕೂಡ ಮಾಡಲಿಲ್ಲ. ರೈಲ್ವೆ ಎಎಸ್ ಐನಿಂದ ಏಟು ತಿಂದ ಪ್ರಯಾಣಿಕನ ಗುರುತು ಪತ್ತೆಯಾಗಿಲ್ಲ.