ಟಿಟಿಡಿಯ ವಿದೇಶಿ ದೇಣಿಗೆಗೆ ಕೇಂದ್ರ ಕೊಕ್ಕೆ; ಎಫ್ ಸಿ ಆರ್ ಎ ಪರವಾನಗಿ ಇನ್ನೂ ನವೀಕರಿಸಿಲ್ಲ: ವರದಿ
ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ)ಗೆ ಕೇಂದ್ರ ಸರ್ಕಾರ ಶಾಕ್ ನೀಡಿದ್ದು, ಎಫ್ ಸಿ ಆರ್ ಎ ಪರವಾನಗಿ ನವೀಕರಿಸದೇ ವಿದೇಶಿ ದೇಣಿಗೆಗೆ ಕೇಂದ್ರ ಕೊಕ್ಕೆ ಹಾಕಿದೆ ಎನ್ನಲಾಗಿದೆ.
Published: 04th January 2022 08:24 AM | Last Updated: 04th January 2022 01:00 PM | A+A A-

ಸಂಗ್ರಹ ಚಿತ್ರ
ತಿರುಮಲ: ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ)ಗೆ ಕೇಂದ್ರ ಸರ್ಕಾರ ಶಾಕ್ ನೀಡಿದ್ದು, ಎಫ್ ಸಿ ಆರ್ ಎ ಪರವಾನಗಿ ನವೀಕರಿಸದೇ ವಿದೇಶಿ ದೇಣಿಗೆಗೆ ಕೇಂದ್ರ ಕೊಕ್ಕೆ ಹಾಕಿದೆ ಎನ್ನಲಾಗಿದೆ.
ಹೌದು.. ಟಿಟಿಡಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದ್ದು, ಟಿಟಿಡಿಯ ಎಫ್ ಸಿ ಆರ್ ಎ ಪರವಾನಗಿ ಕೇಂದ್ರ ಸರ್ಕಾರ ಇನ್ನೂ ನವೀಕರಿಸಿಲ್ಲ. ಇದರಿಂದ ವಿದೇಶಿ ದೇಣಿಗೆ ಸಂಗ್ರಹಿಸಲು ಟಿಟಿಡಿಗೆ ಸಾಧ್ಯವಾಗುತ್ತಿಲ್ಲ ಎಂದು ಟಿಟಿಡಿ ಆಡಳಿತ ಮಂಡಳಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಧಾರ್ಮಿಕ ದತ್ತಿ ಸಂಸ್ಥೆಗಳು ವಿದೇಶಿ ದೇಣಿಗೆ ಸಂಗ್ರಹಿಸಲು ಕೇಂದ್ರ ಗೃಹ ಸಚಿವಾಲಯದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ ಸಿ ಆರ್ ಎ) ಪರವಾನಗಿ ಕಡ್ಡಾಯವಾಗಿದ್ದು, ಒಮ್ಮೆ ಅರ್ಜಿ ಸಲ್ಲಿಸಿದರೆ, ಪರವಾನಗಿ ದೊರೆತರೆ ಪರವಾನಗಿ ಐದು ವರ್ಷಗಳ ಕಾಲ ಮುಂದುವರೆಯಲಿದೆ.
ಮೂಲಗಳ ಪ್ರಕಾರ ಟಿಟಿಡಿ ಪರವಾನಗಿ ಅವಧಿ ಡಿಸೆಂಬರ್ 2020 ರೊಳಗೆ ಮುಕ್ತಾಯಗೊಂಡಿದ್ದು, ಪರವಾನಗಿ ನವೀಕರಣಗೊಳಿಸಿಕೊಳ್ಳಲು ಕಳೆದೊಂದು ವರ್ಷದಿಂದ ಟಿಟಿಡಿ ಹಲವಾರು ಪ್ರಯತ್ನ ಮಾಡಿದೆ. ಆದರೆ, ತಿದ್ದುಪಡಿ ನಿಯಮಗಳಂತೆ ಪರವಾನಗಿ ನವೀಕರಣಗೊಳಿಸಿಕೊಳ್ಳಲು ಟಿಟಿಡಿಗೆ ಸಾಧ್ಯವಾಗಿಲ್ಲ.
ದೇಶಾದ್ಯಂತ 18,778 ಸಂಸ್ಥೆಗಳ ಪರವಾನಗಿ ಡಿಸೆಂಬರ್ 31 ರಂದು ಮುಕ್ತಾಯಗೊಂಡಿದೆ. 12,989 ಸಂಸ್ಥೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರೆ, 5,789 ಸಂಸ್ಥೆಗಳು ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.
2020-21ರಲ್ಲಿ ಟಿಟಿಡಿ ಒಂದು ರೂಪಾಯಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಿಲ್ಲ. ಈ ಹಿಂದೆ ಟಿಟಿಡಿ ವಿದೇಶಿ ಭಕ್ತರಿಂದ ದೇಣಿಗೆ ಪಡೆಯುತ್ತಿತ್ತು. ಪರವಾನಗಿ ನವೀಕರಿಸಲಾಗದ ಕಾರಣ ಟಿಟಿಡಿ ವಿದೇಶಿ ದೇಣಿಗೆ ಸಂಗ್ರಹಿಸಲು ಯಾವುದೇ ಅನುಮತಿ ಹೊಂದಿಲ್ಲ ಎನ್ನಲಾಗಿದೆ.
ಟಿಟಿಡಿ ಮಾತ್ರವಲ್ಲ ಸತ್ಯಸಾಯಿ ಬಾಬಾ ಟ್ರಸ್ಟ್, ಚಿರಂಜೀವಿ ಟ್ರಸ್ಚ್ ಸೇರಿ ಹಲವು ಸಂಸ್ಥೆಗಳ ಪರವಾನಗಿ ಅವಧಿ ಮುಗಿದಿದೆ:
ಇನ್ನು ಟಿಟಿಡಿ ಮಾತ್ರವಲ್ಲದೇ ದೇಶದ ಹಲವು ಸಂಸ್ಥೆಗಳ ಎಫ್ ಸಿಆರ್ ಎ ಪರವಾನಗಿ ಅವಧಿ ಮುಕ್ತಾಯಗೊಂಡಿದೆ. ಆಂಧ್ರ ಪ್ರದೇಶದ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿರುವ ಶ್ರೀ ಸತ್ಯಸಾಯಿ ವೈದ್ಯಕೀಯ ಟ್ರಸ್ಟ್, ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಮತ್ತು ಜಿವಿಕೆ ತುರ್ತು ಸಂಶೋಧನಾ ಸಂಸ್ಥೆ, ತೆಲಂಗಾಣದ ಮಿಷನ್ ಕಾಕತೀಯ ಟ್ರಸ್ಟ್, ಜಾಮಿಯಾ ಮಿಲಿಯಾ ಇಸಾಮಿಯಾ, ಆಕ್ಸ್‌ಫ್ಯಾಮ್ ಇಂಡಿಯಾ, ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಎಫ್‌ಸಿಆರ್‌ಎ ನೋಂದಣಿ ಅವದಿ ಮುಕ್ತಾಯಗೊಂಡಿದೆ. ಇದಲ್ಲದೆ ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ FCRA ಪರವಾನಗಿಯನ್ನು ನವೀಕರಿಸಲು MHA ನಿರಾಕರಿಸಿದ ಕೆಲವೇ ದಿನಗಳ ನಂತರ ಈ ವಿಚಾರ ಬಹಿರಂಗವಾಗಿದೆ.