ಸೇನಾ ಹೆಲಿಕಾಪ್ಟರ್ ದುರಂತ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ತನಿಖಾ ತಂಡದಿಂದ ವಿಸ್ತೃತ ವರದಿ ಸಲ್ಲಿಕೆ
ಡಿಸೆಂಬರ್ 8ರಂದು ತಮಿಳು ನಾಡಿನ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಸೇರಿದಂತೆ 14 ಮಂದಿ ಮೃತಪಟ್ಟಿರುವ ಘಟನೆಯ ತ್ರಿಸೇವಾ ತನಿಖೆಯನ್ನು ಪೂರ್ಣಗೊಳಿಸಿರುವ ತಂಡ ಇಂದು ಬುಧವಾರ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದೆ.
Published: 05th January 2022 02:12 PM | Last Updated: 05th January 2022 02:30 PM | A+A A-

ತಮಿಳು ನಾಡಿನ ಕೂನ್ನೂರು ಬಳಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತ, ರಕ್ಷಣಾ ಸಚಿವ ರಾಜನಾಥ್ ಸಿಂಗ್(ಸಂಗ್ರಹ ಚಿತ್ರ)
ನವದೆಹಲಿ: ಡಿಸೆಂಬರ್ 8ರಂದು ತಮಿಳು ನಾಡಿನ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಸೇರಿದಂತೆ 14 ಮಂದಿ ಮೃತಪಟ್ಟಿರುವ ಘಟನೆಯ ತ್ರಿಸೇವಾ ತನಿಖೆಯನ್ನು ಪೂರ್ಣಗೊಳಿಸಿರುವ ತಂಡ ಇಂದು ಬುಧವಾರ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದೆ.
ರಷ್ಯಾ ಮೂಲದ ಮಿ-17ವಿ5 ಹೆಲಿಕಾಪ್ಟರ್ ದುರಂತಕ್ಕೀಡಾಗಿತ್ತು. ಈ ದುರಂತ ಹೇಗಾಯಿತು ಎಂದು ತ್ರಿಸೇವಾ ತನಿಖೆ ನಡೆಸಿದ್ದು ಇಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ, ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ತನಿಖಾ ಸಮಿತಿ ಮುಖ್ಯಸ್ಥ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರು ಇಂದು ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ತೆರಳಿ ವರದಿ ನೀಡಿ ಸುಮಾರು 45 ನಿಮಿಷಗಳ ಕಾಲ ತನಿಖೆಯ ವಿವರ ನೀಡಿದ್ದಾರೆ.
ಸಂಭಾವ್ಯ ಮಾನವ ದೋಷ ಅಥವಾ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ತಯಾರಿ ನಡೆಸುತ್ತಿದ್ದಾಗ ಸಿಬ್ಬಂದಿ ಭಯಗೊಂಡಿದ್ದರೇ ಎಂಬಿತ್ಯಾದಿ ಸೇರಿದಂತೆ ಅಪಘಾತದ ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ತನಿಖಾ ತಂಡವು ಪರಿಶೀಲಿಸಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಐಎಎಫ್ನ ಬೆಂಗಳೂರು ಪ್ರಧಾನ ಕಛೇರಿಯ ತರಬೇತಿ ಕಮಾಂಡ್ನ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ಸಿಂಗ್ ಅವರು ವಿಮಾನ ಅಪಘಾತ ತನಿಖಾಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಜ.ಬಿಪಿನ್ ರಾವತ್ ಸೇರಿ 13 ಮಂದಿ ನಿಧನ: ಸ್ಥಳಕ್ಕೆ ಏರ್ ಚೀಫ್ ಮಾರ್ಷಲ್ ಭೇಟಿ
ತರಬೇತಿ ಕಮಾಂಡ್ನ ನಿಯಂತ್ರಣವನ್ನು ತೆಗೆದುಕೊಳ್ಳುವ ಮೊದಲು, ಏರ್ ಮಾರ್ಷಲ್ ಅವರು ವಾಯು ಪ್ರಧಾನ ಕಛೇರಿಯಲ್ಲಿ ಡೈರೆಕ್ಟರ್ ಜನರಲ್ (ತಪಾಸಣೆ ಮತ್ತು ಸುರಕ್ಷತೆ) ಆಗಿದ್ದರು. ಸೇವೆ ಸಲ್ಲಿಸುವಾಗ ವಿಮಾನ ಸುರಕ್ಷತೆಗಾಗಿ ವಿವಿಧ ಪ್ರೋಟೋಕಾಲ್ಗಳನ್ನು ಅಭಿವೃದ್ಧಿಪಡಿಸಿದರು.
ತನಿಖಾ ತಂಡದ ಸಲಹೆಯೇನು?: ಇನ್ನು ಮುಂದೆ ಪ್ರಮುಖ ಗಣ್ಯರು, ಅತಿ ಗಣ್ಯರು ಪ್ರಯಾಣಿಸುವಾಗ ಕಾರ್ಯವಿಧಾನಗಳಲ್ಲಿ ಕೆಲವು ಪರಿಷ್ಕರಣೆ ಮಾಡಬೇಕೆಂದು ತ್ರಿಸೇವಾ ತನಿಖೆ ಸಲಹೆ ನೀಡಿದೆ. ಅಂದು ಡಿಸೆಂಬರ್ 8ರಂದು ಮಿ-17ವಿ5 ಪ್ರಯಾಣಿಸುತ್ತಿರುವಾಗ ಪರ್ವತ ಪ್ರದೇಶದಲ್ಲಿ ತೀವ್ರ ಮೋಡ ಎದುರಾಗಿತ್ತು. ಕಣಿವೆ ನಡುವೆ ಕಡಿಮೆ ಸಾಂದ್ರತೆಯಲ್ಲಿ ಹಾರಾಟ ನಡೆಸುತ್ತಿದ್ದರು. ಮೋಡವನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿರಬಹುದು ಎಂದು ಹೇಳಲಾಗುತ್ತಿದೆ. ತನಿಖಾ ತಂಡ ರಕ್ಷಣಾ ಇಲಾಖೆಗೆ ಹಲವು ಶಿಫಾರಸುಗಳನ್ನು ಮಾಡಿದೆ ಎಂದು ತಿಳಿದುಬಂದಿದೆ.
ಅಂದು ಡಿಸೆಂಬರ್ 8ರಂದು ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಅವರ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಸಿಬ್ಬಂದಿ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ , ಪೈಲಟ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಸೇರಿದಂತೆ 14 ಮಂದಿ ಮೃತಪಟ್ಟಿದ್ದರು. ಪೈಲಟ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಒಂದು ವಾರದ ನಂತರ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಅಸುನೀಗಿದ್ದರು.