ಮೊಬೈಲ್ ಕಿತ್ತುಕೊಳ್ಳುವ ಯತ್ನದಲ್ಲಿ ಧನ್ಬಾದ್ ನ್ಯಾಯಾಧೀಶರಿಗೆ ಡಿಕ್ಕಿ ಸಾಧ್ಯತೆ: ಹೈಕೋರ್ಟ್ಗೆ ಸಿಬಿಐ ಮಾಹಿತಿ
ಧನ್ಬಾದ್ ಹಿಟ್ ಅಂಡ್ ರನ್ ಪ್ರಕರಣಕ್ಕೆ ಹೊಸ ತಿರುವು ನೀಡಿರುವ ಸಿಬಿಐ, ನ್ಯಾಯಾಧೀಶ ಉತ್ತಮ್ ಆನಂದ್ ಅವರ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನದಲ್ಲಿ ಆಟೋ ರಿಕ್ಷಾ ಅವರಿಗೆ ಡಿಕ್ಕಿ ಹೊಡೆದಿರಬಹುದು...
Published: 07th January 2022 07:22 PM | Last Updated: 07th January 2022 07:22 PM | A+A A-

ಸಿಸಿಟಿವಿ ದೃಶ್ಯ
ರಾಂಚಿ: ಧನ್ಬಾದ್ ಹಿಟ್ ಅಂಡ್ ರನ್ ಪ್ರಕರಣಕ್ಕೆ ಹೊಸ ತಿರುವು ನೀಡಿರುವ ಸಿಬಿಐ, ನ್ಯಾಯಾಧೀಶ ಉತ್ತಮ್ ಆನಂದ್ ಅವರ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನದಲ್ಲಿ ಆಟೋ ರಿಕ್ಷಾ ಅವರಿಗೆ ಡಿಕ್ಕಿ ಹೊಡೆದಿರಬಹುದು ಎಂದು ಶುಕ್ರವಾರ ಜಾರ್ಖಂಡ್ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಆದಾಗ್ಯೂ, ತನಿಖೆ ಇನ್ನೂ ಮುಂದುವರೆದಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಪಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸಿಬಿಐ ಇಂದು ಹೈಕೋರ್ಟ್ಗೆ ತಿಳಿಸಿದೆ.
ಇದನ್ನು ಓದಿ: ಧನ್ಬಾದ್ ನ್ಯಾಯಾಧೀಶರ ಹಿಟ್ ಅಂಡ್ ರನ್ ಪ್ರಕರಣ: ಸೂಕ್ತ ಮಾಹಿತಿಗಾಗಿ 10 ಲಕ್ಷ ರೂ. ಬಹುಮಾನ ಘೋಷಿಸಿದ ಸಿಬಿಐ
ಕಳೆದ ವರ್ಷ ಜುಲೈ 28 ರಂದು ನ್ಯಾಯಾಧೀಶರು ಬೆಳಗಿನ ಜಾವ ವಾಕಿಂಗ್ ಹೋಗುತ್ತಿದ್ದಾಗ ನಿರ್ಜನ ರಸ್ತೆಯಲ್ಲಿ ಆಟೋ ರಿಕ್ಷಾ ಹಿಂದಿನಿಂದ ಬಂದು "ಉದ್ದೇಶಪೂರ್ವಕವಾಗಿ" ಡಿಕ್ಕಿ ಹೊಡೆದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀರಾಪುರದ ಜಡ್ಜ್ ಕಾಲೋನಿಯಲ್ಲಿರುವ ಉತ್ತಮ್ ಆನಂದ್ ಅವರ ಮನೆಯಿಂದ 500 ಮೀಟರ್ಗಿಂತ ಕಡಿಮೆ ದೂರದಲ್ಲಿರುವ ಗಾಲ್ಫ್ ಮೈದಾನದ ಬಳಿ ಈ ಘಟನೆ ನಡೆದಿತ್ತು.
ಈ ಘಟನೆಯು 'ಅಪಘಾತ'ಕ್ಕಿಂತ 'ಉದ್ದೇಶಪೂರ್ವಕ' ಕೊಲೆ ಎಂದು ಸೂಚಿಸುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ಕೆಲವೇ ಗಂಟೆಗಳಲ್ಲಿ ಜಾರ್ಖಂಡ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು ಮತ್ತು ಇದು "ನ್ಯಾಯಾಂಗದ ಮೇಲಿನ ನೇರ ದಾಳಿ" ಎಂದು ಕರೆದಿತ್ತು.
"ನ್ಯಾಯಾಧೀಶರ ಮೊಬೈಲ್ ಫೋನ್ ಕಸಿದುಕೊಳ್ಳುವ ಉದ್ದೇಶದಿಂದ ಡಿಕ್ಕಿ ಹೊಡೆಸಿರುವ ಅಂಶದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆದಾಗ್ಯೂ, ತನಿಖೆ ಇನ್ನೂ ಮುಂದುವರೆದಿದೆ ಮತ್ತು ಈ ನಿಟ್ಟಿನಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ” ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.
ಇಬ್ಬರು ಆರೋಪಿಗಳ ನಾರ್ಕೋ ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಅನ್ನು ಮತ್ತೊಮ್ಮೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಸಿಬಿಐ ಹೇಳಿದೆ.