ಪ್ರಧಾನಿ ಮೋದಿಗೆ ಭದ್ರತಾ ಲೋಪ: ಸೋಮವಾರದವರೆಗೆ ವಿಚಾರಣೆಯಿಂದ ದೂರವಿರಲು ಪಂಜಾಬ್, ಕೇಂದ್ರಕ್ಕೆ 'ಸುಪ್ರೀಂ' ಆದೇಶ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತಕ್ಷಣವೇ ಕಾಪಾಡಿಕೊಂಡು ಸಂರಕ್ಷಿಸಿಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಪಂಜಾಬ್ ರಿಜಿಸ್ಟ್ರಾರ್ ಜನರಲ್ ಮತ್ತು ಹರ್ಯಾಣ ಹೈಕೋರ್ಟ್ ಗೆ ಆದೇಶಿಸಿದೆ.
Published: 07th January 2022 01:34 PM | Last Updated: 07th January 2022 03:29 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತಕ್ಷಣವೇ ಕಾಪಾಡಿಕೊಂಡು ಸಂರಕ್ಷಿಸಿಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಪಂಜಾಬ್ ರಿಜಿಸ್ಟ್ರಾರ್ ಜನರಲ್ ಮತ್ತು ಹರ್ಯಾಣ ಹೈಕೋರ್ಟ್ ಗೆ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ, ಪ್ರಧಾನಿ ಭೇಟಿ ಸಂದರ್ಭದಲ್ಲಿ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಇಡೀ ದಾಖಲೆಗಳನ್ನು ಸಂಗ್ರಹಿಸಲು ಅಗತ್ಯ ಸಹಾಯವನ್ನು ಒದಗಿಸಲು ಸಹಕಾರ ನೀಡಬೇಕೆಂದು ಪಂಜಾಬ್ ಸರ್ಕಾರ, ಪೊಲೀಸ್ ಅಧಿಕಾರಿಗಳಿಗೆ, ಎಸ್ ಪಿಜಿ ಮತ್ತು ಇತರ ಏಜೆನ್ಸಿಗಳಿಗೆ ಆದೇಶ ನೀಡಿದ್ದೇವೆ ಎಂದು ಹೇಳಿದೆ.
ಪ್ರಧಾನಿಯವರ ಪಂಜಾಬ್ ಭೇಟಿಗೆ ಸಂಬಂಧಿಸಿದ ವೈರ್‌ಲೆಸ್ ಸಂದೇಶಗಳು ಸೇರಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ(NIA) ಅಧಿಕಾರಿಯೊಬ್ಬರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಸಹಾಯ ಮಾಡಬೇಕು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ವಿಚಾರಣೆಯಿಂದ ದೂರವಿರಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮಿತಿಗಳಿಗೆ ನ್ಯಾಯಪೀಠ ಆದೇಶ ನೀಡಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಭದ್ರತಾ ಲೋಪ: ಗೃಹ ಸಚಿವಾಲಯದಿಂದ 3 ಸದಸ್ಯ ಸಮಿತಿ ರಚನೆ
ಇಂದು ವಿಚಾರಣೆಯ ಸಂದರ್ಭದಲ್ಲಿ, ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ದೇಶದ ಪ್ರಧಾನಿಗೆ ರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಕಳೆದ ಬುಧವಾರ ಪ್ರಧಾನಿ ಭೇಟಿ ಸಂದರ್ಭದಲ್ಲಿ ಈ ನ್ಯಾಯಾಲಯದ ಹಿಂದಿನ ತೀರ್ಪನ್ನು ಹೇಗೆ ಅನುಸರಿಸಲಿಲ್ಲ ಎಂಬುದನ್ನು ನ್ಯಾಯಪೀಠ ಮುಂದೆ ಮನದಟ್ಟು ಮಾಡಲು ಪ್ರಯತ್ನಿಸಿ ಇದು ರಾಷ್ಟ್ರೀಯ ಭದ್ರತೆಯ ಸಮಸ್ಯೆಯಾಗಿದೆ ಎಂದು ಹೇಳಿದರು.
ಕೇಂದ್ರದ ಪರವಾಗಿ ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾದ ಸಾಲಿಸಿಟರ್-ಜನರಲ್ ತುಷಾರ್ ಮೆಹ್ತಾ, ಈ ಘಟನೆಯನ್ನು "ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರ" ಎಂದು ವ್ಯಾಖ್ಯಾನಿಸಿದರು.
ರಸ್ತೆಯಲ್ಲಿ ಪ್ರಧಾನಿ ಬೆಂಗಾವಲು ಪಡೆ ಬಂದಾಗಲೆಲ್ಲಾ ಡಿಜಿಪಿ ಅವರು ಪ್ರಧಾನಿ ಪ್ರಯಾಣ ಮಾಡಬಹುದೇ ಎಂದು ರಸ್ತೆ ಪರಿಶೀಲಿಸುತ್ತಾರೆ. ಈ ವೇಳೆ ಡಿಜಿ ಹಸಿರು ನಿಶಾನೆ ತೋರಿದ್ದರು. ವಿವಿಐಪಿ ಚಲನೆ ಮುಂದೆ ಓಡುವ ಪೈಲಟ್ ಕಾರಿಗೆ ರಾಜ್ಯ ಡಿಜಿಪಿ ಅಂತಹ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಮೆಹ್ತಾ ಪೀಠಕ್ಕೆ ವಿವರಿಸಿದರು. ಅಂತಹ ಉಲ್ಲಂಘನೆಯು ಗಡಿಯಾಚೆಗಿನ ಭಯೋತ್ಪಾದನೆಯ ಸಂಚು ಆಗಿರಬಹುದು ಎಂದು ಕೂಡ ಗಂಭೀರ ವಿಷಯವನ್ನು ನ್ಯಾಯಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಸ್ತಾಪಿಸಿದರು.