ಐದು ರಾಜ್ಯಗಳ ಚುನಾವಣೆ: ‘ಕ್ರಿಮಿನಲ್’ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾರಣ ಕೇಳಿದ ಚುನಾವಣಾ ಆಯೋಗ
ರಾಜಕೀಯ ಪಕ್ಷಗಳು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಅಥವಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳ ವಿವರಗಳನ್ನು ತಮ್ಮ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯ
Published: 08th January 2022 08:11 PM | Last Updated: 08th January 2022 08:13 PM | A+A A-

ಕೇಂದ್ರ ಚುನಾವಣಾ ಆಯೋಗದ ಕಚೇರಿ
ನವದೆಹಲಿ: ರಾಜಕೀಯ ಪಕ್ಷಗಳು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಅಥವಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳ ವಿವರಗಳನ್ನು ತಮ್ಮ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಶನಿವಾರ ಹೇಳಿದೆ.
ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷಗಳು ಕಾರಣಗಳನ್ನು ಉಲ್ಲೇಖಿಸಬೇಕಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಸುಶೀಲ್ ಚಂದ್ರ ಅವರು ಹೇಳಿದ್ದಾರೆ.
ಇದನ್ನು ಓದಿ: ಪಂಚರಾಜ್ಯಗಳ ಚುನಾವಣೆ: ಕೊರೊನಾ ಭೀತಿ; ಆನ್ ಲೈನ್ ನಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ, ರೋಡ್ ಶೋ ಇಲ್ಲ!
“ಕ್ರಿಮಿನಲ್ ಪ್ರಕರಣಗಳಲ್ಲಿ ಹೆಸರಿರುವ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ರಾಜಕೀಯ ಪಕ್ಷಗಳು ತಮ್ಮ ವೆಬ್ಸೈಟ್ಗಳ ಮುಖಪುಟದಲ್ಲಿ ಅಪ್ಲೋಡ್ ಮಾಡಬೇಕು. ಹಾಗೇಯೇ ಯಾವ ಕಾರಣಕ್ಕಾಗಿ ಇಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂಬುದರ ಕುರಿತು ವಿವರ ನೀಡಬೇಕು ಎಂದು ಸಿಇಸಿ ಸುಶೀಲ್ ಚಂದ್ರ ತಿಳಿಸಿದ್ದಾರೆ.
ಮೂರು ಸಂದರ್ಭಗಳಲ್ಲಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್ಗಳಲ್ಲಿ ಅಪರಾಧದ ಪೂರ್ವಾಪರಗಳನ್ನು ಕಡ್ಡಾಯವಾಗಿ ಪ್ರಚಾರ ಮಾಡಲಾಗುವುದು ಎಂದು ಅವರು ಹೇಳಿದರು.
ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗುವ ಮೂಲಕ ಮಾದರಿ ನೀತಿ ಸಂಹಿತೆ(ಎಂಸಿಸಿ) ಜಾರಿಗೆ ಬಂದಿದೆ. ಎಂಸಿಸಿ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಬರುವಂತೆ ಎಲ್ಲಾ ಸುದೀರ್ಘವಾದ ವ್ಯವಸ್ಥೆಗಳನ್ನು ಮಾಡಿದೆ ಮತ್ತು ಈ ಮಾರ್ಗಸೂಚಿಗಳ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ಸಿಇಸಿ ಹೇಳಿದೆ.
ಮತದಾರರು ಎಂಸಿಸಿ ಉಲ್ಲಂಘನೆ, ಹಣದ ವಿತರಣೆ ಮತ್ತು ಯಾವುದೇ ಘಟನೆಯನ್ನು ವರದಿ ಮಾಡಲು “ವಿಜಿಲ್ ಅಪ್ಲಿಕೇಶನ್” ಅನ್ನು ಬಳಸಬಹುದಾಗಿದೆ. ದೂರು ದಾಖಲಾದ 100 ನಿಮಿಷಗಳಲ್ಲಿ ಇಸಿಐ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಾರೆ ಎಂದು ಸಿಇಸಿ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಣಿಪುರದ 60 ಕ್ಷೇತ್ರಗಳಿಗೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಗೋವಾದಲ್ಲಿ 40 ವಿಧಾನಸಭಾ ಕ್ಷೇತ್ರಗಳು, ಪಂಜಾಬ್ 117 ಕ್ಷೇತ್ರಗಳು ಮತ್ತು ಉತ್ತರಾಖಂಡ್ನಲ್ಲಿ 70 ಸ್ಥಾನಗಳಿಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದೆ.