ಸುಪ್ರೀಂಕೋರ್ಟ್ನಲ್ಲೂ ಕೊರೋನಾ ಆರ್ಭಟ: ನಾಲ್ವರು ನ್ಯಾಯಮೂರ್ತಿಗಳಿಗೆ ತಗುಲಿದ ಸೋಂಕು
ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಆರ್ಭಟಿಸುತ್ತಿದ್ದು ದಿನ ನಿತ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಪ್ರೀಂಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
Published: 09th January 2022 01:44 PM | Last Updated: 09th January 2022 01:47 PM | A+A A-

ಸಂಗ್ರಹ ಚಿತ್ರ
ನವದೆಹಲಿ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಆರ್ಭಟಿಸುತ್ತಿದ್ದು ದಿನ ನಿತ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಪ್ರೀಂಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ಸಂಬಂಧಿಸಿದ 150 ಮಂದಿ ಉದ್ಯೋಗಿಗಳಲ್ಲಿಯೂ ಕೊರೋನಾ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದ್ದು, ಎಲ್ಲರೂ ಕ್ವಾರಂಟೈನ್ ಗೊಳಗಾಗಿದ್ದಾರೆಂದು ವರದಿಗಳು ತಿಳಿಸಿವೆ.
ಸೋಂಕು ತಗುಲಿರುವ ಎಲ್ಲಾ 4 ನ್ಯಾಯಮೂರ್ತಿಗಳು ಕಳೆದ ಮಂಗಳವಾರ ನ್ಯಾಯಮೂರ್ತಿ ಸುಭಾಷಣ್ ರೆಡ್ಡಿ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆ ನಂತರ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರು ಇತರ ನಾಲ್ವರು ನ್ಯಾಯಮೂರ್ತಿಗಳೊಂದಿಗೆ ಕಳೆದ ಗುರುವಾರ ಕೋವಿಡ್ ಹರಡುವಿಕೆ ಕುರಿತು ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಸ್ತುತ ಸಿ ಜೆ ಐ ನ್ಯಾಯಮೂರ್ತಿ ಎನ್ ವಿ ರಮಣ ಸೇರಿದಂತೆ ಸುಪ್ರೀಂ ಕೋರ್ಟ್ನಲ್ಲಿ ಒಟ್ಟು 32 ನ್ಯಾಯಮೂರ್ತಿಗಳಿದ್ದು, ಈ ಪೈಕಿ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ದೆಹಲಿ ಸೇರಿದಂತೆ ದೇಶಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವಾರದಲ್ಲಿ ಮೂರು ದಿನ ಮಾತ್ರ ವರ್ಚುವಲ್ ಮಾದರಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸುತ್ತದೆ.
ಸಂಸತ್ತಿನಲ್ಲಿ ದಿಢೀರ್ ನಡೆಸಿದ ಕೋವಿಡ್ ಪರೀಕ್ಷೆಗಳಲ್ಲಿ 400 ಸಿಬ್ಬಂದಿಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಸೋಂಕು ತಗುಲಿದವರಲ್ಲಿ ಸಚಿವಾಲಯದ, ಭದ್ರತಾ ಸಿಬ್ಬಂದಿ ಸೇರಿದ್ದಾರೆ.
ಈ ನಡುವೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1,59,632 ಹೊಸ ಪ್ರಕರಣಗಳು ಪತ್ತೆಯಾಗಿದ್ದು 327 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,90,611ಕ್ಕೆ ತಲುಪಿದೆ.