ಮಧ್ಯಪ್ರದೇಶದಲ್ಲಿ ಅಕ್ರಮ ಮರಳು ದಂದೆ: ಅರಣ್ಯ ಇಲಾಖೆ ದಾಳಿ ವೇಳೆ ಮಹಿಳೆ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ದುಷ್ಕರ್ಮಿಗಳು
ಮಧ್ಯಪ್ರದೇಶದ ಮೊರೆನಾದಲ್ಲಿ ಭಾನುವಾರ ಸಂಜೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ತಪ್ಪಿಸಿಕೊಳ್ಳವ ಯತ್ನದಲ್ಲಿ ಮಹಿಳೆ ಹಾಗೂ ಇತರರಿಗೆ ಡಿಕ್ಕಿ ಹೊಡೆಸಿದ್ದು...
Published: 10th January 2022 12:52 AM | Last Updated: 10th January 2022 12:52 AM | A+A A-

ಸಾಂದರ್ಭಿಕ ಚಿತ್ರ
ಮೊರೆನಾ: ಮಧ್ಯಪ್ರದೇಶದ ಮೊರೆನಾದಲ್ಲಿ ಭಾನುವಾರ ಸಂಜೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ತಪ್ಪಿಸಿಕೊಳ್ಳವ ಯತ್ನದಲ್ಲಿ ಮಹಿಳೆ ಹಾಗೂ ಇತರರಿಗೆ ಡಿಕ್ಕಿ ಹೊಡೆಸಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 3 ರಲ್ಲಿ ಈ ಘಟನೆ ನಡೆದಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ(CSP) ಅತುಲ್ ಸಿಂಗ್ ಹೇಳಿದ್ದಾರೆ.
"ಟ್ರಾಕ್ಟರ್ ಚಂಬಲ್ ನದಿಯಿಂದ ಅಕ್ರಮ ಮರಳು ಸಾಗಣೆಯಲ್ಲಿ ತೊಡಗಿತ್ತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಅದನ್ನು ಹಿಡಿಯಲು ಪ್ರಯತ್ನಿಸಿದಾಗ, ಚಾಲಕ ಪರಾರಿಯಾಗಲು ವೇಗವಾಗಿ ಚಲಾಯಿಸಿದ್ದಾರೆ. ಈ ವೇಳೆ 28 ವರ್ಷದ ಮಹಿಳೆ ಮೇಲೆ ಟ್ರ್ಯಾಕ್ಟರ್ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಸಿಎಸ್ಪಿ ಹೇಳಿದ್ದಾರೆ.