
ಶಾರೂಖ್ ಖಾನ್
ಮುಂಬೈ: ಬಾಲಿವುಡ್ ನ ಖ್ಯಾತ ನಟ ಶಾರೂಕ್ ಖಾನ್ ಅವರ ಮನೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಜ.11 ರಂದು ಬಂಧಿಸಲಾಗಿದೆ. ಜನವರಿ 6, 2022 ರಂದು ಅನಾಮಿಕನೊಬ್ಬ ಮಹಾರಾಷ್ಟ್ರ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ, ಶಾರುಖ್ ಖಾನ್ ಅವರ ಐಷಾರಾಮಿ ಬಂಗಲೆ ಮನ್ನತ್ ಅನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.
ಈ ಪ್ರಕರಣದ ಬೆನ್ನತ್ತಿದ ಮುಂಬೈ ಪೊಲೀಸರು, ಕರೆಯನ್ನು ಟ್ರೇಸ್ ಮಾಡಿದಾಗ ಮಧ್ಯಪ್ರದೇಶದ ಜಬಲ್‌ಪುರದಿಂದ ಕರೆ ಬಂದಿರುವುದು ಪತ್ತೆಯಾಗಿದೆ. ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು, ಮಧ್ಯಪ್ರದೇಶದ ಜಬಲ್‌ಪುರದಲ್ಲಿಯೇ ಆರೋಪಿಯನ್ನು ಬಂಧನ ಮಾಡಿದ್ದಾರೆ. ಬಂಧಿತ ಆರೋಪಿ ಜಿತೇಶ್ ಠಾಕೂರ್ ಎಂದು ಗುರುತಿಸಲಾಗಿದ್ದು, ಬಂಧಿತನಿಂದ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.
ಶಾರುಖ್ ಬಂಗಲೆ ಅಷ್ಟೇ ಅಲ್ಲದೆ, ಮುಂಬೈನ ವಿವಿಧೆಡೆ ಭಯೋತ್ಪಾದಕ ದಾಳಿ ಹಾಗೂ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಡಿತದ ಚಟ ಹೊಂದಿದ್ದ ಆರೋಪಿ, ಈ ಹಿಂದೆಯೂ ಸಹ ಕರೆ ಮಾಡಿ ಪೊಲೀಸ್ ಎಸ್‌ಒಎಸ್ ಸೇವಾ ಡಯಲ್ 100 ನೌಕರರೊಂದಿಗೆ ಜಗಳ ಮಾಡಿದ್ದ ಎಂದು ತಿಳಿದು ಬಂದಿದೆ.