ಯುಪಿ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ಎಸ್‍ಪಿ ಜತೆ ಎನ್ ಸಿಪಿ ಮೈತ್ರಿ ಘೋಷಿಸಿದ ಶರದ್ ಪವಾರ್
ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸಲು ಕೆಲವು ಪಕ್ಷಗಳು ಪಣ ತೊಟ್ಟಿದ್ದು, ಇದೀಗ ಯುಪಿ ರಾಜಕೀಯ ರಂಗದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
Published: 11th January 2022 08:16 PM | Last Updated: 12th January 2022 01:11 PM | A+A A-

ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್
ಮುಂಬೈ: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸಲು ಕೆಲವು ಪಕ್ಷಗಳು ಪಣ ತೊಟ್ಟಿದ್ದು, ಇದೀಗ ಯುಪಿ ರಾಜಕೀಯ ರಂಗದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಮೈತ್ರಿ ಮಾಡಿಕೊಂಡಿರುವುದಾಗಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಂಗಳವಾರ ಘೋಷಿಸಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್, ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಮತದಾರರನ್ನು ಧ್ರುವೀಕರಣಗೊಳಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಉತ್ತರ ಪ್ರದೇಶದ 13 ಬಿಜೆಪಿ ಶಾಸಕರು ಕೇಸರಿ ಪಕ್ಷವನ್ನು ತೊರೆದು ಎಸ್‍ಪಿ ಸೇರಲಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬಿಜೆಪಿಗೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ; ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸಂಪುಟಕ್ಕೆ ಇಂದು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಎನ್‍ಸಿಪಿ ವರಿಷ್ಠರಿಂದ ಈ ನಿರ್ಧಾರ ಹೊರಬಿದ್ದಿದೆ.
“ಉತ್ತರಪ್ರದೇಶದ ಜನರು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ. ಉತ್ತರ ಪ್ರದೇಶದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ನಾವು ರಾಜ್ಯದಲ್ಲಿ ಬದಲಾವಣೆಯನ್ನು ಖಂಡಿತವಾಗಿ ನೋಡುತ್ತೇವೆ” ಎಂದರು.
2022ರ ಗೋವಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಎನ್‍ಸಿಪಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ ಅವರು, ಕರಾವಳಿ ರಾಜ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಜಂಟಿ ಹೋರಾಟ ನಡೆಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಎನ್‍ಸಿಪಿ ನಾಯಕ ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್ ಅವರು ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ” ಎಂದು ತಿಳಿಸಿದರು.
ಅಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಚಿಂತನೆ ಇದ್ದು, ಸಮಾನ ಮನಸ್ಕ ಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಗೋವಾದಲ್ಲಿ ಪರಿವರ್ತನೆ ಬೇಕು ಎಂಬುದು ನಮ್ಮ ಬಯಕೆ. ಅಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಅಗತ್ಯವಿದೆ ಎಂದರು.