ಪಂಜಾಬ್ ಅಸೆಂಬ್ಲಿ ಚುನಾವಣೆ: ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಜನರಿಗೇ ಬಿಟ್ಟ ಕೇಜ್ರಿವಾಲ್!
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಸಾಮಾನ್ಯ ಜನತೆಯನ್ನು ಕೇಳಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
Published: 13th January 2022 04:21 PM | Last Updated: 13th January 2022 05:16 PM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಸಾಮಾನ್ಯ ಜನತೆಯನ್ನು ಕೇಳಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗಾಗಿ ಜನರಿಂದ ಪ್ರತಿಕ್ರಿಯೆ ಪಡೆಯಲು ಮೊಬೈಲ್ ನಂಬರ್ ಒಂದನ್ನು ಪಂಜಾಬ್ ಎಎಪಿ ಘಟಕದ ಅಧ್ಯಕ್ಷ ಹಾಗೂ ಪಕ್ಷದ ಹಿರಿಯ ಮುಖಂಡ ರಾಘವ್ ಚಡ್ಡಾ ಅವರ ಸಮ್ಮುಖದಲ್ಲಿ ಕೇಜ್ರಿವಾಲ್ ಬಿಡುಗಡೆ ಮಾಡಿದ್ದಾರೆ. ಜನವರಿ 17 ರ ಸಂಜೆಯವರೆಗೂ ಜನರು ಧ್ವನಿ, ಎಂಎಸ್ ಎಂಸ್ ಅಥವಾ ವಾಟ್ಸಾಪ್ ಮೂಲಕ ಪಂಜಾಬಿನ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತಿಳಿಸಬಹುದಾಗಿದೆ.
ಪಂಜಾಬಿನ ಮುಖ್ಯಮಂತ್ರಿ ಹುದ್ದೆ ರೇಸ್ ನಲ್ಲಿ ನಾನಿಲ್ಲ ಎಂದು ಕೇಜ್ರಿವಾಲ್ ಸ್ಪಷ್ಪಪಡಿಸಿದ್ದಾರೆ. ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಸಿಖ್ ಸಮುದಾಯದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದು ಜೂನ್ 2021ರಲ್ಲಿ ಕೇಜ್ರಿವಾಲ್ ಹೇಳಿದ್ದರು. ತದನಂತರ ಭಗವಂತ ಮನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಲು ಬಯಸಿದ್ದರು. ಆದರೆ, ತದನಂತರ ಜನರೇ ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಯಸಿದ್ದಾರೆ.
ಮೊಬೈಲ್ ನಂಬರ್ 7074870748 ಗೆ ಸಂಜೆ ಐದು ಗಂಟೆಯವರೆಗೂ ಜನರು ಕರೆ, ಸಂದೇಶ ಅಥವಾ ವಾಟ್ಸಾಪ್ ಕಳುಹಿಸಬಹುದಾಗಿದೆ. ಹೆಚ್ಚಿನ ಜನರು ಪಕ್ಷದ ಯಾವ ಅಭ್ಯರ್ಥಿ ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಾರೋ ಅವರನ್ನು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
''ನನ್ನ ವೈಯಕ್ತಿಕ ಆಯ್ಕೆ ಪ್ರಮುಖವಲ್ಲ, ಪಂಜಾಬಿನ ಜನ ಯಾರನ್ನೂ ಹೇಳುತ್ತಾರೋ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗುವುದು, ಜನರಿಗೆ ಇಷ್ಟವಾದ ಉತ್ತಮ ಅಭ್ಯರ್ಥಿಯನ್ನು ನೀಡಲು ನಾವು ಬಯಸಿದ್ದೇವೆ. ಇದೀಗ ಪಂಜಾಬಿನ ಮೂರು ಕೋಟಿ ಜನರ ನಿರ್ಧಾರಕ್ಕೆ ಬಿಟ್ಟಿರುವುದಾಗಿ ಕೇಜ್ರಿವಾಲ್ ತಿಳಿಸಿದರು. ಫೆಬ್ರವರಿ 14 ರಂದು ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ.