ಶೀಘ್ರದಲ್ಲೇ ಉತ್ತರ ಪ್ರದೇಶ ಸರ್ಕಾರದ 10 ಸಚಿವರ ರಾಜೀನಾಮೆ ಸಾಧ್ಯತೆ: ಸಂಜಯ್ ರಾವತ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ 10 ಸಚಿವರು ರಾಜೀನಾಮೆ ನೀಡುವ ಸಾಧ್ಯತೆಯಿರುವುದಾಗಿ ಹೇಳಿದ್ದಾರೆ.
Published: 14th January 2022 02:51 PM | Last Updated: 14th January 2022 04:06 PM | A+A A-

ಸಂಜಯ್ ರಾವತ್, ಯೋಗಿ ಆದಿತ್ಯನಾಥ್
ಮುಂಬೈ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ 10 ಸಚಿವರು ರಾಜೀನಾಮೆ ನೀಡುವ ಸಾಧ್ಯತೆಯಿರುವುದಾಗಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವದಲ್ಲಿ ಆರು ಶಾಸಕರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಮೂವರು ಸಚಿವರು ಪಕ್ಷ ತೊರೆದಿದ್ದಾರೆ. ಅವರೆಲ್ಲರೂ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ರಾಜನಾಮೆ ಸಲ್ಲಿಸಿದ ಸಚಿವರ ಪೈಕಿ ಧರಮ್ ಸಿಂಗ್ ಮೂರನೇ ಸಚಿವರಾಗಿದ್ದಾರೆ.
ಈ ಅಂಕಿಅಂಶಗಳು ಮತ್ತಷ್ಟು ಹೆಚ್ಚಾಗಲಿದೆ. ಐದು ವರ್ಷ ಒತ್ತಡದಲ್ಲಿ ಕಾರ್ಯನಿರ್ವಹಿದ್ದನ್ನು ಇದು ತೋರಿಸುತ್ತದೆ. ಬಿಜೆಪಿ ಆಡಳಿತಾವಧಿಯಲ್ಲಿ ಯಾವುದೇ ಕೆಲಸ ಆಗಿಲ್ಲ, ಸರ್ಕಾರ ಸರಿಯಾಗಿ ಆಡಳಿತ ನಡೆಸಲಿಲ್ಲ ಎಂದು ಉತ್ತರ ಪ್ರದೇಶದ ಜನರು ಹೇಳುತ್ತಿದ್ದಾರೆ. ಶೇಕಡಾ 80: 20 ರಷ್ಟು ರಾಜಕೀಯ ಧ್ರವೀಕರಣದ ಕೆಲಸ ಆಗಿರಬಹುದು ಆದರೆ, ರಾಜ್ಯ ಮತ್ತು ದೇಶದ ಅಭಿವೃದ್ಧಿಯಾಗಿಲ್ಲ ಎನ್ನುತ್ತಿದ್ದಾರೆ ಎಂದು ರಾವತ್ ಎಎನ್ ಐ ಸುದ್ದಿಸಂಸ್ಥೆಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ: ಇಂದು ಪಕ್ಷ ತೊರೆದ ಸಚಿವ, ಶಾಸಕ, ಮೂರು ದಿನದಲ್ಲಿ 8ನೇ ರಾಜಿನಾಮೆ!
ಗುರುವಾರ ಉತ್ತರ ಪ್ರದೇಶದ ನಿರುದ್ಯೋಗಿ ಯುವಕರನ್ನು ಭೇಟಿಯಾಗಿದ್ದೆ. ಅವರು ಉತ್ತರ ಪ್ರದೇಶದಲ್ಲಿ ಬದಲಾವಣೆ ಬಯಸಿದ್ದಾರೆ. ಪ್ರಮುಖ ಸಚಿವರು, ಒಬಿಸಿ ಮುಖಂಡರು ಪಕ್ಷ ತೊರೆಯುತ್ತಿದ್ದು, ಯಾವ ರೀತಿಯ ಗಾಳಿ ಬೀಸುತ್ತಿದೆ ಎಂಬುದರ ಅರ್ಥವಾಗುತ್ತಿದೆ ಎಂದು ರಾವತ್ ಹೇಳಿದರು.
ಕಳೆದ ಕೆಲವು ದಿನಗಳಲ್ಲಿ ಬಿಜೆಪಿ ಪಕ್ಷ ತೊರೆದಿರುವ ಅನೇಕ ಮುಖಂಡರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಹಕ್ಕುಗಳ ಬಗ್ಗೆ ಬಿಜೆಪಿ ಸರ್ಕಾರ ಮಾತನಾಡುತಿಲ್ಲ ಎಂದು ಆರೋಪಿದ್ದಾರೆ. ಇದು ಆರಂಭ ಮಾತ್ರ, ಮುಂದಿನ ದಿನಗಳಲ್ಲಿ 10 ಸಚಿವರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದರು.
ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ 50 ರಿಂದ 100 ಕ್ಷೇತ್ರಗಳಲ್ಲಿ ಶಿವಸೇನಾ ಸ್ಪರ್ಧೆ ಮಾಡುತ್ತದೆ. ಅದಕ್ಕಾಗಿ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಸಂಜಯ್ ರಾವತ್ ತಿಳಿಸಿದರು.