ಸೋನು ಸೂದ್ ಸಹೋದರಿಯ ಕಾರಣದಿಂದ ಟಿಕೆಟ್ ವಂಚಿತ ಕಾಂಗ್ರೆಸ್ ಶಾಸಕ ಬಿಜೆಪಿಗೆ ಸೇರ್ಪಡೆ
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ಸಹೋದರಿಗೆ ಟಿಕೆಟ್ ನೀಡುವ ಕಾರಣದಿಂದಾಗಿ ಟಿಕೆಟ್ ವಂಚಿತರಾಗಿದ್ದ ಕಾಂಗ್ರೆಸ್ ಹಾಲಿ ಶಾಸಕ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
Published: 16th January 2022 09:13 AM | Last Updated: 16th January 2022 09:13 AM | A+A A-

ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ
ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ಸಹೋದರಿಗೆ ಟಿಕೆಟ್ ನೀಡುವ ಕಾರಣದಿಂದಾಗಿ ಟಿಕೆಟ್ ವಂಚಿತರಾಗಿದ್ದ ಕಾಂಗ್ರೆಸ್ ಹಾಲಿ ಶಾಸಕ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮೋಗಾ ಶಾಸಕ ಹರ್ಜೋತ್ ಕಮಲ್ ಶನಿವಾರದಂದು ಬಿಜೆಪಿ ಸೇರ್ಪಡೆಗೊಂಡಿದ್ದು, ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭಾಗಿಯಾಗಿದ್ದರು.
ಕಾಂಗ್ರೆಸ್ ಪಂಜಾಬ್ ಚುನಾವಣೆಗಾಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಮಲ್ ಸೇರಿದಂತೆ ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಸಚಾರ್ ಅವರಿಗೆ ಮೊಗಾ ವಿಧಾನಸಭೆಯಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ.
"ನಾನು ಇಂದು ಬಿಜೆಪಿ ಸೇರ್ಪಡೆಗೊಂಡಿದ್ದೇನೆ" ಎಂದು ಹೇಳಿರುವ ಕಮಲ್, ಬಿಜೆಪಿ ರಾಷ್ಟ್ರೀಯ ನಾಯಕತ್ವಕ್ಕೆ ಧನ್ಯವಾದ ತಿಳಿಸಿದ್ದಾರೆ
21 ವರ್ಷಗಳ ಕಾಲ ಕಾಂಗ್ರೆಸ್ ಗೆ ದುಡಿದಿದ್ದೇನೆ. ಆದರೂ ಹಾಲಿ ಶಾಸಕನಾಗಿದ್ದ ನನ್ನನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕಮಲ್, ಸೋನು ಸೂದ್ ಸಹೋದರಿಯ ಅರ್ಹತೆಯನ್ನು ಪ್ರಶ್ನಿಸಿದ್ದಾರೆ. ಮಾಳವಿಕಾ ಸೂದ್ ಜ.10 ರಂದು ಪಕ್ಷವನ್ನು ಸೇರಿದ್ದರು.