ಗಣರಾಜ್ಯೋತ್ಸವ: ಸುಭಾಷ್ ಚಂದ್ರ ಬೋಸ್ ಕುರಿತ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡದ ಕೇಂದ್ರದ ವಿರುದ್ಧ ದೀದಿ ಕೆಂಡಾಮಂಡಲ
ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಹೊಸ ತಿಕ್ಕಾಟ ಪ್ರಾರಂಭವಾಗಿದೆ. ಈ ಬಾರಿ ಗಣರಾಜ್ಯೋತ್ಸವಕ್ಕೆ ಸುಭಾಷ್ ಚಂದ್ರ ಬೋಸರ ಕುರಿತ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡುವ ವಿಷಯವಾಗಿ...
Published: 17th January 2022 01:42 PM | Last Updated: 17th January 2022 01:49 PM | A+A A-

ಮಮತಾ ಬ್ಯಾನರ್ಜಿ- ಪ್ರಧಾನಿ ಮೋದಿ
ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಹೊಸ ತಿಕ್ಕಾಟ ಪ್ರಾರಂಭವಾಗಿದೆ. ಈ ಬಾರಿ ಗಣರಾಜ್ಯೋತ್ಸವಕ್ಕೆ ಸುಭಾಷ್ ಚಂದ್ರ ಬೋಸರ ಕುರಿತ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡುವ ವಿಷಯವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶಗೊಂಡಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸರ ಹಾಗೂ ಸ್ವಾತಂತ್ರ್ಯ ಚಳುವಳಿಗೆ ಅವರ ಕೊಡುಗೆಗಳನ್ನು ಹೇಳುವ ಸ್ತಬ್ಧ ಚಿತ್ರವನ್ನು ಯೋಜಿಸಿತ್ತು. ಆದರೆ ಕೇರಳದ ಬಳಿಕ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರ ಯೋಜನೆಯನ್ನೂ ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಈ ಸಂಬಂಧ ಆಕ್ರೋಶಗೊಂಡು ಪ್ರಧಾನಿ ನರೇಂದ್ರ ಮೋದಿಗೆ ದೀದಿ 2 ಪುಟಗಳ ಪತ್ರ ಬರೆದಿದ್ದು, ತಮಗೆ ಕೇಂದ್ರದ ನಡೆಯಿಂದ ಅಘಾತ ಉಂಟಾಗಿದ್ದು, ಭಾವನೆಗಳಿಗೆ ನೋವುಂಟಾಗಿದೆ. ಕಾರಣವೇ ಇಲ್ಲದೇ ಸ್ತಬ್ಧ ಚಿತ್ರದ ಥೀಮ್ ನ್ನು ತಿರಸ್ಕರಿಸಿರುವುದು ಅತ್ಯಂತ ನೋವಿನ ಸಂಗತಿ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ಸುಭಾಷ್ ಚಂದ್ರ ಬೋಸರೊಂದಿಗೆ ಈ ದೇಶದ ಅತ್ಯಂತ ಹೆಮ್ಮೆಯ ಪುತ್ರರು/ ಪುತ್ರಿಯರ ವಿವರಣೆಗಳನ್ನು ಸ್ತಬ್ಧ ಚಿತ್ರಗಳಲ್ಲಿ ಪ್ರದರ್ಶಿಸುವ ಯೋಜನೆ ಇತ್ತು" ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಹೇಳಿದ್ದಾರೆ.
75 ನೇ ವರ್ಷದ ಸ್ವಾತಂತ್ರ್ಯದ ಸಂಭ್ರಮದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಂಗಾಳದ ಸ್ವಾತಂತ್ರ್ಯ ಸೇನಾನಿಗಳಿಗೆ ಜಾಗವಿಲ್ಲದೇ ಇರುವುದು ರಾಜ್ಯದ ಜನತೆಗೆ ಅತ್ಯಂತ ನೋವುಂಟು ಮಾಡುವ ಸಂಗತಿಯಾಗಿದ್ದು ನಿಲುವನ್ನು ಮರುಪರಿಶೀಲಿಸುವಂತೆ ಮಮತಾ ಬ್ಯಾನರ್ಜಿ ಪತ್ರದಲ್ಲಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿಗಳ ವರ್ಚ್ಯುಯಲ್ ಸಭೆಯಲ್ಲಿ ಎರಡು ಗಂಟೆ ಕಾದರೂ ಪ್ರಧಾನಿಯೊಂದಿಗೆ ಮಾತನಾಡಲು ಮಮತಾಗೆ ಸಿಗದ ಅವಕಾಶ
ಇದೇ ವಿಷಯವಾಗಿ ಕಾಂಗ್ರೆಸ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದ ನಡೆ ಪಶ್ಚಿಮ ಬಂಗಾಳದ ಜನತೆ ಹಾಗೂ ಅಲ್ಲಿನ ಸಂಸ್ಕೃತಿಗೆ, ಸುಭಾಷ್ ಚಂದ್ರ ಬೋಸ್ ಗೆ ಉಂಟುಮಾಡಿರುವ ಅವಮಾನವಾಗಿದೆ ಎಂದು ಹೇಳಿದ್ದಾರೆ.
"ಆದರೆ ಬಿಜೆಪಿ ಮಾತ್ರ ಇದಕ್ಕೆ ಸಮರ್ಥನೆ ನೀಡಿದ್ದು, ಕೆಲವು ತಾಂತ್ರಿಕ ದೋಷಗಳಿಂದಾಗಿ ಸ್ತಬ್ಧ ಚಿತ್ರದ ಪ್ರಸ್ತಾವನೆಯನ್ನು ತಡೆಹಿಡಿರಬಹುದು" ಎಂದು ಪಶ್ಚಿಮ ಬಂಗಾಳದ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಸುಭಾಷ್ ಚಂದ್ರ ಬೋಸರ ಕುಟುಂಬ ಸದಸ್ಯರಾಗಿರುವ ಚಂದ್ರ ಬೋಸ್ ಸಹ ಕೇಂದ್ರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.