
ಪ್ರಧಾನಿ ಮೋದಿ
ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮತ್ತು ಕೃಷ್ಣರಂತೆ ದೇವರ ಅವತಾರ ಎಂದು ಮಧ್ಯ ಪ್ರದೇಶದ ಕೃಷಿ ಸಚಿವ ಮತ್ತು ಬಿಜೆಪಿ ನಾಯಕ ಕಮಲ್ ಪಟೇಲ್ ಹೇಳಿದ್ದಾರೆ.
ಹರ್ದಾದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೃಷ್ಟಿಸಿರುವ ಭ್ರಷ್ಟಾಚಾರ ಮತ್ತು ಅನಾಚಾರಗಳನ್ನು ತೊಲಗಿಸಲು ಪ್ರಧಾನಿ ಮೋದಿ ಅವತಾರವೆತ್ತಿ ಬಂದಿದ್ದಾರೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುತ್ತಿದೆ. ಭ್ರಷ್ಟಾಚಾರ ಕೊನೆಯಾಗುತ್ತಿದೆ. ಇಷ್ಟೊಂದು ಜನರ ಕಲ್ಯಾಣ ಓರ್ವ ಜನಸಾಮಾನ್ಯನಿಂದ ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರು ಅವತಾರ ತಾಳಿದ್ದಾರೆ ಎಂದು ಹೇಳಿದ್ದಾರೆ.
ಭೂಮಿಯಲ್ಲಿ ಅನ್ಯಾಯ ಉಂಟಾದಾಗ, ರಾಮ ದೇವರು ಅವತಾರ ತಾಳಿ ಬಂದಿದ್ದರು. ರಾಕ್ಷಸ ಸಂಹಾರ ಮಾಡಿ ರಾಮರಾಜ್ಯ ಸ್ಥಾಪಿಸಿದ್ದರು. ಕಂಸನ ದೌರ್ಜನ್ಯಗಳು ಹೆಚ್ಚಾದಾಗ, ಶ್ರೀಕೃಷ್ಣನು ಜನ್ಮ ತಳೆದು ಅವನ ಕ್ರೌರ್ಯವನ್ನು ಕೊನೆಗೊಳಿಸಿದನು. ಅದೇ ಮಾದರಿಯಲ್ಲಿ ಈಗ ಪ್ರಧಾನಿ ಮೋದಿ ಜನ್ಮತಾಳಿದ್ದು, ದೇಶದಲ್ಲಿ ನಡೆಯುತ್ತಿರುವ ಎಲ್ಲ ಭ್ರಷ್ಟಾಚಾರ, ಅನಾಚಾರವನ್ನು ಕೊನೆಗೊಳಿಸಲಿದ್ದಾರೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಅಂತೆಯೇ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ರನ್ನೂ ಹೊಗಳಿರುವ ಪಟೇಲ್, ಕಳೆದ ನವೆಂಬರ್‌ನಲ್ಲಿ ಬುಡಕಟ್ಟು ಐಕಾನ್ ತಾಂತ್ಯ ಭಿಲ್ ಅವರ ಅವತಾರ ಎಂದು ಬಣ್ಣಿಸಿದ್ದರು. ಶಿವರಾಜ್ ಸಿಂಗ್ ಚೌಹ್ವಾಣ್ ಅವರು ಭಾರತೀಯ "ರಾಬಿನ್ ಹುಡ್" ಎಂದು ಪಟೇಲ್ ಬಿಂಬಿಸಿದ್ದರು.