ಉತ್ತರ ಪ್ರದೇಶ ಚುನಾವಣೆ: ಗೋರಖ್ಪುರದಲ್ಲಿ ಸಿಎಂ ಯೋಗಿ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ
ಉತ್ತರ ಪ್ರದೇಶ ಚುನಾವಣೆ ರಣಕಣ ರಂಗೇರತೊಡಗಿದೆ. ಪಕ್ಷಾಂತರ ಪರ್ವ ಬಲು ಜೋರಾಗಿದ್ದು, ಬಿಜೆಪಿ, ಎಸ್ ಪಿ, ಕಾಂಗ್ರೆಸ್ ಗೆಲುವನ್ನು ಅಳೆದು-ತೂಗಿ ಹಲವು ನಾಯಕರು ಒಂದು ಪಕ್ಷದಿಂದ ಇನ್ನೊಂದು ಪಾರ್ಟಿಗೆ ಹಾರ ತೊಡಗಿದ್ದಾರೆ.
Published: 20th January 2022 02:56 PM | Last Updated: 20th January 2022 02:56 PM | A+A A-

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್
ಲಖನೌ: ಉತ್ತರ ಪ್ರದೇಶ ಚುನಾವಣೆ ರಣಕಣ ರಂಗೇರತೊಡಗಿದೆ. ಪಕ್ಷಾಂತರ ಪರ್ವ ಬಲು ಜೋರಾಗಿದ್ದು, ಬಿಜೆಪಿ, ಎಸ್ ಪಿ, ಕಾಂಗ್ರೆಸ್ ಗೆಲುವನ್ನು ಅಳೆದು-ತೂಗಿ ಹಲವು ನಾಯಕರು ಒಂದು ಪಕ್ಷದಿಂದ ಇನ್ನೊಂದು ಪಾರ್ಟಿಗೆ ಹಾರ ತೊಡಗಿದ್ದಾರೆ.
ಇದೇ ವೇಳೆ ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತೊಡೆ ತಟ್ಟಿದ್ದಾರೆ. ಗೋರಖ್ ಪುರ ಸದರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಎಂ ಯೋಗಿ ಆದಿಥ್ಯನಾಥ್ ವಿರುದ್ಧ ಸೆಣಸುವುದಾಗಿ ಘೋಷಣೆ ಮಾಡಿದ್ದಾರೆ. ಚಂದ್ರಶೇಖರ್ ಆಜಾದ್ ಅವರು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಯುಪಿ ಚುನಾವಣೆಯ ಬಿಸಿ ದಿನೇ ದಿನೇ ಹೆಚ್ಚಾಗ ತೊಡಗಿದೆ.
ಇದನ್ನು ಓದಿ: ಉತ್ತರ ಪ್ರದೇಶ ಚುನಾವಣೆ: ಕಾಂಗ್ರೆಸ್ ನ 41 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ, 16 ಮಹಿಳೆಯರಿಗೆ ಟಿಕೇಟ್
ಇದಕ್ಕೂ ಮುನ್ನ ಭೀಮ್ ಆರ್ಮಿ ಮುಖಂಡ ಚಂದ್ರಶೇಖರ್ ಆಜಾದ್, ಸಮಾಜವಾದಿ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಆದರೆ, ಎರಡೂ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಗಳು ಉದ್ಭವಾದ ಹಿನ್ನೆಲೆಯಲ್ಲಿ ಮೈತ್ರಿ ಆಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಆಜಾದ್ ಸಮಾಜ್ ಪಾರ್ಟಿ ಉತ್ತರ ಪ್ರದೇಶದ 33 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದೆ.
ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪರ್ವ
ಈ ಮಧ್ಯೆ, ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಲಾಯಂ ಸಿಂಗ್ ಅವರ ಸಂಬಂಧಿ ಪ್ರಮೋದ್ ಗುಪ್ತಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಔರೈಯಾದಲ್ಲಿನ ಬಿದುನಾದ ಮಾಜಿ ಶಾಸಕರು, ಗುಪ್ತಾ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾಹಿತಿ ಹೊರ ಹಾಕಿದ್ದಾರೆ.
ಒಂದು ದಿನದ ಹಿಂದಷ್ಟೇ ಮುಲಾಯಂ ಸಿಂಗ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಕಮಲಕ್ಕೆ ಜಿಗಿದಿದ್ದರು. ಇನ್ನೊಂದೆಡೆ ಕಾಂಗ್ರೆಸ್ ನ ಪೋಸ್ಟರ್ ಗರ್ಲ್ ಪ್ರಿಯಾಂಕಾ ಮೌರ್ಯ ಕೂಡ ಬಿಜೆಪಿಗೆ ಹಾರಿದ್ದಾರೆ. ಹೀಗಾಗಿ, ಉತ್ತರ ಪ್ರದೇಶ ರಣಕಣದಲ್ಲಿ ಪಕ್ಷಾಂತರಿಗಳ ಪರ್ವ ಆರಂಭವಾಗಿದ್ದು, ಲಾಭ-ನಷ್ಟ ಲೆಕ್ಕಾಚಾರದಲ್ಲಿ ಪಕ್ಷಗಳಿಗೆ ಜಿಗಿಯಲು ತುದಿಗಾಲಲ್ಲಿ ನಿಂತಿದ್ದಾರೆ.