ಅಮರ್ ಜವಾನ್ ಜ್ಯೋತಿ ನಂದಿಸಿದರೆ ಇತಿಹಾಸವನ್ನು ನಂದಿಸಿದಂತೆ: ಕಾಂಗ್ರೆಸ್
ರಾಷ್ಟ್ರರಾಜಧಾನಿ ನವದೆಹಲಿಯ ಇಂಡಿಯಾ ಗೇಟ್ ಬಳಿ ಅಮರ್ ಜವಾನ್ ಜ್ಯೋತಿಯನ್ನು ನಂದಿಸಿ, ಯುದ್ಧ ಸ್ಮಾರಕದಲ್ಲಿ ಬೆಳಗಿಸುವ ಮೂಲಕ ಬಿಜೆಪಿ ಸರ್ಕಾರ ದೇಶದ ಇತಿಹಾಸವನ್ನೂ ನಂದಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
Published: 21st January 2022 01:31 PM | Last Updated: 21st January 2022 01:31 PM | A+A A-

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯ ಇಂಡಿಯಾ ಗೇಟ್ ಬಳಿ ಅಮರ್ ಜವಾನ್ ಜ್ಯೋತಿಯನ್ನು ನಂದಿಸಿ, ಯುದ್ಧ ಸ್ಮಾರಕದಲ್ಲಿ ಬೆಳಗಿಸುವ ಮೂಲಕ ಬಿಜೆಪಿ ಸರ್ಕಾರ ದೇಶದ ಇತಿಹಾಸವನ್ನೂ ನಂದಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಕೆಲವರಿಗೆ ದೇಶಭಕ್ತಿ ಮತ್ತು ತ್ಯಾಗ ಅರ್ಥವಾಗುವುದಿಲ್ಲ. ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಮತ್ತೊಮ್ಮೆ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿಸುತ್ತದೆ ಎಂದು ಹೇಳಿದ್ದಾರೆ.
"ನಮ್ಮ ವೀರ ಯೋಧರ ಅಮರ ಜ್ಯೋತಿಯನ್ನು ಇಂದು ನಂದಿಸಿರುವುದು ಅತೀವ ದುಃಖ ತಂದಿದೆ. ಕೆಲವರಿಗೆ ದೇಶಭಕ್ತಿ ಮತ್ತು ತ್ಯಾಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರವಾಗಿಲ್ಲ.. ನಾವು ಮತ್ತೊಮ್ಮೆ ನಮ್ಮ ಯೋಧರ 'ಅಮರ್ ಜವಾನ್ ಜ್ಯೋತಿ'ಯನ್ನು ಬೆಳಗಿಸುತ್ತೇವೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಇದರಂತೆ ಬಿಜೆಪಿ ನಾಯಕ ಸಂಬಿತ್ ಪಾತ್ರ ಕೂಡ ಟ್ವೀಟ್ನಲ್ಲಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಮಾತನಾಡಿ, ಅಮರ್ ಜವಾನ್ ಜ್ಯೋತಿಯನ್ನು ನಂದಿಸಿದರೆ, ಇತಿಹಾಸವನ್ನು ನಾಶಪಡಿಸಿದ್ದಕ್ಕೆ ಸಮಾನವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಕಟ್ಟಡದ ಯೋಜನಾ ವೆಚ್ಚ 20% ಹೆಚ್ಚಳ; 1,250 ಕೋಟಿ ಖರ್ಚು!
"ಅಮರ್ ಜವಾನ್ ಜ್ಯೋತಿಯನ್ನು ನಂದಿಸುವುದು ಇತಿಹಾಸವನ್ನು ನಂದಿಸಿದ್ದಕ್ಕೆ ಸಮಾನವಾಗಿದೆ. ಇದು ಪಾಕಿಸ್ತಾನವನ್ನು ಎರಡು ಭಾಗವನ್ನಾಗಿ ಮಾಡಿ, ದಕ್ಷಿಣ ಏಷ್ಯಾದ ಭೂಪಟವನ್ನು ಮರುರೂಪಿಸಿದ 3,483 ವೀರ ಸೈನಿಕರ ತ್ಯಾಗವನ್ನು ವ್ಯಾಖ್ಯಾನಿಸುತ್ತದೆ. "ಅಮರ್ ಜವಾನ್ ಜ್ಯೋತಿ ರಾಷ್ಟ್ರದ ಗಮನವನ್ನು ಸೆಳೆದಿದೆ. ಸಾಕಷ್ಟು ಜನರು ಅದನ್ನು ಪೂಜಿಸುತ್ತಾ ಬಂದಿದ್ದಾರೆ. ಭಾರತವು ಎರಡು ಶಾಶ್ವತ ಜ್ಯೋತಿಯನ್ನೇಕೆ ಹೊಂದಬಾರದು? ಎಂದು ಪ್ರಶ್ನಿಸಿದ್ದಾರೆ.
ಜ್ವಾಲೆಯನ್ನು ನಂದಿಸುವುದು ಇತಿಹಾಸವನ್ನು ತೆಗೆದುಹಾಕುವುದಕ್ಕೆ ಸಮಾನವಾಗಿದೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಆರೋಪಿಸಿದ್ದಾರೆ.
ಇಂಡಿಯಾ ಗೇಟ್ನಲ್ಲಿ ಅಮರ ಜ್ಯೋತಿಯನ್ನು ನಂದಿಸುವುದು ಅಪರಾಧ ಕೃತ್ಯಕ್ಕಿಂತಲೂ ಕಡಿಮೆಯಾದುದಲ್ಲ. ಕೇಂದ್ರ ಸರ್ಕಾರ ಇತಿಹಾಸವನ್ನು ಮರು-ಬರೆಯುವ ಯೋಜನೆಯಲ್ಲಿದ್ದು, ಇದಕ್ಕೆ ರಾಷ್ಟ್ರವು ಮೌನವಾಗಿರುವುದು ನನಗೆ ಆಶ್ಚರ್ಯವನ್ನು ತರಿಸುತ್ತಿದೆ ಎಂದಿದ್ದಾರೆ.
ಈ ನಡುವೆ ಅಮರ ಜ್ಯೋತಿ ಕುರಿತು ಹರಿದಾಡುತ್ತಿರುವ ಸುದ್ದಿಗಳ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಅಮರ್ ಜವಾನ್ ಜ್ಯೋತಿಯ ಸಮೀಪದಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಅಮರ್ ಜವಾನ್ ಜ್ಯೋತಿ ಲೀನವಾಗಲಿದೆ. ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನ ಮಾಡುತ್ತಿದ್ದೇವೆ. ಅಮರ ಸೈನಿಕರ ಜ್ಯೋತಿ ಯುದ್ಧ ಸ್ಮಾರಕದಲ್ಲಿ ಉರಿಯಲಿದೆ. ಆದರೆ, ಜ್ಯೋತಿಯನ್ನು ಆರಿಸುತ್ತಿಲ್ಲ ಎಂದು ಹೇಳಿದೆ.