
ಹೊಸ ಸಂಸತ್ ಭವನ
ನವದೆಹಲಿ: ದೇಶದ ನೂತನ ಸಂಸತ್ ಭವನ ನಿರ್ಮಾಣದ ವೆಚ್ಚ ಶೇ.29ರಷ್ಟು ಹೆಚ್ಚಳವಾಗಿದೆ.
ಹೌದು.. ದೇಶದ ನೂತನ ಸಂಸತ್ ಭವನ ನಿರ್ಮಾಣದ ವೆಚ್ಚ ಶೇ.29ರಷ್ಟು ಹೆಚ್ಚಳವಾಗಿದ್ದು, ಈ ಹಿಂದೆ 971 ಕೋಟಿ ರೂಪಾಯಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ನಿರ್ಮಾಣ ಯೋಜನೆಗಳಲ್ಲಿನ ಬದಲಾವಣೆಗಳು ಮತ್ತು ಸುಪ್ರೀಂಕೋರ್ಟ್ ನ ನಿರ್ದೇಶನಗಳ ಪಾಲನೆಯಿಂದಾಗಿ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿದ್ದು, 1,250 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ.
ಈ ಹಿಂದೆ ನಿಗದಿ ಮಾಡಲಾಗಿದ್ದ 971 ಕೋಟಿಗಿಂತ ಹೆಚ್ಚುವರಿ 229 ಕೋಟಿ ಸೇರಿಸಿ ಒಟ್ಟು 1,250 ಖರ್ಚು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ವರದಿಯ ಪ್ರಕಾರ, ಪರಿಷ್ಕೃತ ಅಂದಾಜು ವೆಚ್ಚಕ್ಕಾಗಿ ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ಲೋಕಸಭೆ ಸಚಿವಾಲಯದಿಂದ ತಾತ್ವಿಕ ಅನುಮೋದನೆಯನ್ನು ಕೋರಿದೆ. CPWD ಇತ್ತೀಚೆಗೆ ಯೋಜನೆಯ ವೆಚ್ಚದ ವಿವರಗಳು ಮತ್ತು ಕೆಲಸ-ಪ್ರಗತಿಯ ವಿವರಗಳನ್ನು 5 ಸದಸ್ಯರ ಸಮಿತಿಗೆ ಪ್ರಸ್ತುತಪಡಿಸಿದೆ. ಮೆಗಾ ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಯಡಿಯಲ್ಲಿ ಎಲ್ಲಾ ಕೆಲಸಗಳನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಈ ಸಮಿತಿ ರಚನೆ ಮಾಡಿದೆ.
40% ಯೋಜನೆ ಪೂರ್ಣ, ಅಕ್ಟೋಬರ್ 2022 ಗಡುವು
ಹೊಸ ಸಂಸತ್ ಭವನದ ಕೆಲಸವನ್ನು ರೂ. 971 ಕೋಟಿಗೆ ಟಾಟಾಗೆ ನೀಡಲಾಗಿದ್ದು, ಯೋಜನೆಯ 40% ರಷ್ಟು ಭಾಗ ಪೂರ್ಣಗೊಂಡಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರವು ಅಕ್ಟೋಬರ್ 2022ರ ಗಡುವು ನಿಗದಿಪಡಿಸಿದೆ. ಚಳಿಗಾಲದ ಅಧಿವೇಶನವನ್ನು ಹೊಸ ಕಟ್ಟಡದಲ್ಲಿ ನಡೆಸಬೇಕೆಂದು ಸರ್ಕಾರ ಬಯಸಿದೆ. ಹೆಚ್ಚುವರಿ ಕಾಮಗಾರಿ ಮತ್ತು ನಿರ್ಮಾಣ ಯೋಜನೆಯಲ್ಲಿ ಬದಲಾವಣೆಗಳಿದ್ದರೂ ಸಹ ಯೋಜನೆ ಪೂರ್ಣಗೊಳಿಸಲು ನೀಡಲಾಗಿರುವ ಗಡುವಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇದನ್ನೂ ಓದಿ: ಸೆಂಟ್ರಲ್ ವಿಸ್ಟಾ ಯೋಜನೆಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ಪ್ರಧಾನಿ ಮೋದಿ ಅನಿರೀಕ್ಷಿತ ಭೇಟಿ, ಪರಿಶೀಲನೆ; ವಿಡಿಯೋ
13 ಎಕರೆಯಲ್ಲಿ ನೂತನ ಸಂಸತ್ ಭವನ ನಿರ್ಮಾಣ
ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ 4 ಅಂತಸ್ತಿನ ಕಟ್ಟಡವನ್ನು 13 ಎಕರೆಯಲ್ಲಿ ನಿರ್ಮಿಸಲಾಗುತ್ತಿದೆ. ಇದು ರಾಷ್ಟ್ರಪತಿ ಭವನದಿಂದ ಸ್ವಲ್ಪ ದೂರದಲ್ಲಿದೆ. ಈ ಯೋಜನೆಯು 75ನೇ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನಂತರ ಗಡುವನ್ನು ಮರು ಹೊಂದಾಣಿಕೆ ಮಾಡಿ ಅಕ್ಟೋಬರ್ಗೆ ನಿಗದಿಪಡಿಸಲಾಗಿದೆ. ಕೇಂದ್ರೀಯ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ಹೊಸ ತ್ರಿಕೋನ ಸಂಸತ್ ಭವನ, ಪ್ರಧಾನ ಮಂತ್ರಿ ಭವನ, ಪಿಎಂಒ, ಉಪ ರಾಷ್ಟ್ರಪತಿ ಭವನ, ಸಾಮಾನ್ಯ ಕೇಂದ್ರ ಸಚಿವಾಲಯ ಮತ್ತು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗಿನ ಕಾರಿಡಾರ್ ಅನ್ನು ನವೀಕರಿಸಲಾಗುತ್ತಿದೆ.