
ಗೋವಾ ವಿಧಾನಸಭೆ (ಸಂಗ್ರಹ ಚಿತ್ರ)
ಪಣಜಿ: 40 ಸದಸ್ಯರನ್ನು ಹೊಂದಿರುವ ಗೋವಾ ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕರು ಪಕ್ಷಾಂತರವಾಗಿದ್ದಾರೆ. ಈ ದಾಖಲೆಯ ಪಕ್ಷಾಂತರದ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಪ್ರಕಟಿಸಿದ್ದು, ವಿಧಾನಸಭೆಯ ಸದಸ್ಯರ ಪೈಕಿ ಶೇ.60 ರಷ್ಟು ಮಂದಿ ಕಳೆದ 5 ವರ್ಷಗಳಲ್ಲಿ ಪಕ್ಷಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗೋವಾ ಈ ಮೂಲಕ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ 5 ವರ್ಷಗಳಲ್ಲಿ ಅತಿ ಹೆಚ್ಚು ಪಕ್ಷಾಂತರಕ್ಕೆ ಸಾಕ್ಷಿಯಾದ ಪ್ರದೇಶ ಎಂಬ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದೆ. ಗೋವಾದಲ್ಲಿ ಫೆ.14 ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ.
ಶಾಸಕರ ಈ ಪಕ್ಷಾಂತರ ಪರ್ವವನ್ನು ಜನತೆಯ ತೀರ್ಪಿಗೆ ತದ್ವಿರುದ್ಧ ಎಂದು ವಿಶ್ಲೇಷಿಸಲಾಗುತ್ತಿದೆ. 2017 ರಲ್ಲಿ ರಾಜೀನಾಮೆ ನೀಡಿ, ಚುನಾವಣೆ ಎದುರಿಸುವುದಕ್ಕೂ ಮುನ್ನ ಬಿಜೆಪಿ ಸೇರಿದ್ದ ಕಾಂಗ್ರೆಸ್ ಶಾಸಕರಾಗಿದ್ದ ವಿಶ್ವಜಿತ್ ರಾಣೆ, ಸುಭಾಷ್ ಶಿರೋಧ್ಕರ್ ಹಾಗೂ ದಯಾನಂದ್ ಸೋಪ್ಟೆ ಅವರ ಹೆಸರು ಈ ಪಕ್ಷಾಂತರ ಪಟ್ಟಿಯಲ್ಲಿಲ್ಲ ಎಂದು ವರದಿ ಹೇಳಿದೆ.
2019 ರಲ್ಲಿ ವಿಪಕ್ಷ ನಾಯಕರಾಗಿದ್ದ ಚಂದ್ರಕಾಂತ್ ಕವ್ಲೇಕರ್ ಅವರನ್ನೂ ಸೇರಿ ಕಾಂಗ್ರೆಸ್ ಶಾಸಕರು ಗುಂಪು ಗುಂಪಾಗಿ ಬಿಜೆಪಿ ಸೇರಿದ್ದರು.
ಈಗಲೂ ಚುನಾವಣೆಯ ಅವಧಿಯಲ್ಲಿ ಪಕ್ಷಾಂತರ ಮುಂದುವರೆದಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು (17 ಕ್ಷೇತ್ರಗಳಲ್ಲಿ) ಗಳಿಸಿತ್ತು. ಆದರೆ 13 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.