ಕ್ರಿಕೆಟ್ ಆಡುತ್ತಿದ್ದ ಮಕ್ಕಳ ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಸಚಿವರ ಪುತ್ರ; ಹಲವರಿಗೆ ಗಾಯ
ಹಾರದ ಪ್ರವಾಸೋದ್ಯಮ ಸಚಿವ ಮತ್ತು ಬಿಜೆಪಿ ನಾಯಕ ನಾರಾಯಣ ಪ್ರಸಾದ್ ಪುತ್ರ ತಮ್ಮ ಜಮೀನಿನಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಹಾರ್ದಿಯಾ ಗ್ರಾಮದಲ್ಲಿ ನಡೆದಿದೆ.
Published: 24th January 2022 12:27 PM | Last Updated: 24th January 2022 12:27 PM | A+A A-

ಸಾಂದರ್ಭಿಕ ಚಿತ್ರ
ಚಂಪಾರಣ್ಯ: ಬಿಹಾರದ ಪ್ರವಾಸೋದ್ಯಮ ಸಚಿವ ಮತ್ತು ಬಿಜೆಪಿ ನಾಯಕ ನಾರಾಯಣ ಪ್ರಸಾದ್ ಪುತ್ರ ತಮ್ಮ ಜಮೀನಿನಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಹಾರ್ದಿಯಾ ಗ್ರಾಮದಲ್ಲಿ ನಡೆದಿದೆ.
ಸಚಿವರ ಪುತ್ರ ಬಬ್ಲು ಪ್ರಸಾದ್ ಅಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳನ್ನು ಜಾಗ ಖಾಲಿ ಮಾಡುವಂತೆ ಕೇಳಲು ಹೋದಾಗ ವಿವಾದ ಉಂಟಾಗಿದೆ. ಆತ ಅಲ್ಲಿದ್ದ ಕೆಲವರನ್ನು ಥಳಿಸಿ ನಂತರ ತನ್ನ ಪಿಸ್ತೂಲ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಸಚಿವರ ಪುತ್ರ ಬಬ್ಲು ಪ್ರಸಾದ್ ಸೇರಿದಂತೆ ಹಲವಾರು ಸ್ಥಳೀಯರು ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ತಿಳಿದ ತಕ್ಷಣ ಗ್ರಾಮಸ್ಥರು ಸಚಿವರ ನಿವಾಸಕ್ಕೆ ಆಗಮಿಸಿ ಅವರ ವಾಹನವನ್ನು ಧ್ವಂಸಗೊಳಿಸಿದರು ಮತ್ತು ಅವರ ಮಗ ಬಬ್ಲುಗೆ ಥಳಿಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಈ ಮಧ್ಯೆ, ಬಿಹಾರದ ಸಚಿವ ನಾರಾಯಣ ಪ್ರಸಾದ್ ಅವರು ತಮ್ಮ ಜಮೀನನ್ನು ಗ್ರಾಮಸ್ಥರು ಒತ್ತುವರಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ಥಳೀಯರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ವಿರೋಧಿಸಿದ ತನ್ನ ಕಿರಿಯ ಸಹೋದರನ ಮೇಲೆ ಗ್ರಾಮಸ್ಥರು ಮೊದಲು ಹಲ್ಲೆ ನಡೆಸಿದರು, ನಂತರ ಕುಟುಂಬದ ಕೆಲವು ಸದಸ್ಯರಿಗೂ ಥಳಿಸಲಾಗಿದೆ ಎಂದು ಹೇಳಿದರು.
ನನ್ನ ಕುಟುಂಬ ಸದಸ್ಯರನ್ನು ಗ್ರಾಮಸ್ಥರು ಥಳಿಸಿದ ನಂತರ, ನನ್ನ ಮಗ ತನ್ನ ಪರವಾನಗಿ ಪಡೆದ ರೈಫಲ್ ಮತ್ತು ಪಿಸ್ತೂಲ್ನೊಂದಿಗೆ ಸ್ಥಳಕ್ಕೆ ಹೋದನು ಆದರೆ ಅವನ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ ಗ್ರಾಮಸ್ಥರು ನನ್ನ ವಾಹನವನ್ನೂ ಧ್ವಂಸಗೊಳಿಸಿದರು ಎಂದು ನಾರಾಯಣ ಪ್ರಸಾದ್ ಹೇಳಿದರು.
ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ವರ್ಮಾ ಅವರ ಪ್ರಕಾರ, ಸಚಿವರ ಪುತ್ರನ ಜೊತೆಯಲ್ಲಿ ಚಿಕ್ಕಪ್ಪ ಹರೇಂದ್ರ ಪ್ರಸಾದ್, ಮ್ಯಾನೇಜರ್ ವಿಜಯ್ ಮತ್ತು ಇತರ ಸಹಚರರು ಇದ್ದರು, ಘರ್ಷಣೆಯಲ್ಲಿ ಎಲ್ಲರಿಗೂ ಗಾಯಗಳಾಗಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.