ಸಂಪುಟಕ್ಕೆ ಸಿಧು ಸೇರ್ಪಡೆಗೆ ಪಾಕಿಸ್ತಾನ ಪ್ರಧಾನಿಯಿಂದ ಮನವಿ ಬಂದಿತ್ತು; ಪಂಜಾಬ್ ಸಿಎಂ ಅಮರಿಂದರ್ ಸಿಂಗ್
ಪಂಜಾಬ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಿಎಂ ಅಮರಿಂದರ್ ಸಿಂಗ್ ತಮ್ಮ ಅಧಿಕಾರಾವಧಿಯಲ್ಲಿ ನಡೆದಿದ್ದ ಮಹತ್ವದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.
Published: 24th January 2022 06:43 PM | Last Updated: 24th January 2022 06:43 PM | A+A A-

ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್
ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಿಎಂ ಅಮರಿಂದರ್ ಸಿಂಗ್ ತಮ್ಮ ಅಧಿಕಾರಾವಧಿಯಲ್ಲಿ ನಡೆದಿದ್ದ ಮಹತ್ವದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.
"ನಾನು ಮುಖ್ಯಮಂತ್ರಿಯಾಗಿದ್ದಾಗ ನವಜೋತ್ ಸಿಂಗ್ ಸಿಧು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಸಂದೇಶ ಪಾಕಿಸ್ತಾನದಿಂದ ನನಗೆ ಬಂದಿತ್ತು ಏಕೆಂದರೆ ನವಜೋತ್ ಸಿಂಗ್ ಸಿಧು ಅವರ ಪ್ರಧಾನಿಯ ಹಳೆಯ ಸ್ನೇಹಿತ ಎಂಬ ಕಾರಣಕ್ಕೆ ಇಂತಹದ್ದೊಂದು ಮನವಿ ಬಂದಿತ್ತು" ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿರುವ ಅಮರಿಂದರ್ ಸಿಂಗ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಂಜಾಬ್ ನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. "ಸಿಧು ಅವರನ್ನು ನೀವು ಸಂಪುಟದಲ್ಲಿಟ್ಟುಕೊಂಡರೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಿಮಗೆ ಕೃತಜ್ಞರಾಗಿರುವರು" ಎಂಬ ಸಂದೇಶ ಪಾಕಿಸ್ತಾನದಿಂದ ಬಂದಿತ್ತು ಎಂದು ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ನಾನು ಸಿಧು ಅವರನ್ನು ಸಂಪುಟದಿಂದ ತೆಗೆದ ಬಳಿಕ ಪಾಕಿಸ್ತಾನದಿಂದ ಇಂಥದ್ದೊಂದು ಸಂದೇಶ ಬಂದಿತ್ತು. ಒಂದು ವೇಳೆ ಅವರು ಕೆಲಸ ಮಾಡದೇ ಇದ್ದಲ್ಲಿ ನೀವು ಅವರನ್ನು ಸಂಪುಟದಿಂದ ತೆಗೆಯಬಹುದು ಎಂದು ಪಾಕಿಸ್ತಾನ ಹೇಳಿತ್ತು ಎಂಬುದನ್ನು ಸಿಂಗ್ ಹೇಳಿದ್ದಾರೆ. ಅವರು ಬಿಜೆಪಿ ಕಚೇರಿಯಲ್ಲಿ ಸ್ಥಾನ ಹಂಚಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.