'ಪುಷ್ಪಾ' ಸ್ಟೈಲ್ ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್: ಪೊಲೀಸರ ಮೇಲೆ ಕೊಡಲಿ ಎಸೆದು ಪರಾರಿಗೆ ಯತ್ನಿಸಿದ ನಟೋರಿಯಸ್ ಗ್ಯಾಂಗ್ ಅರೆಸ್ಟ್
ಪುಷ್ಪಾ ಚಿತ್ರದ ಶೈಲಿಯಲ್ಲೇ ರಕ್ತಚಂದನ ಸ್ಮಗ್ಲಿಂಗ್ ಮಾಡಿ ಅದನ್ನು ತಡೆಯಲು ಬಂದ ಪೊಲೀಸರ ಮೇಲೆ ಕೊಡಲಿಗಳಿಂದ ಹಲ್ಲೆ ಮಾಡಿದ ನಟೋರಿಯಸ್ ಗ್ಯಾಂಗ್ ಅನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
Published: 24th January 2022 11:14 PM | Last Updated: 25th January 2022 01:32 PM | A+A A-

ರಕ್ತ ಚಂದನ ಕಳ್ಳಸಾಗಣೆದಾರರ ಬಂಧನ
ನೆಲ್ಲೂರು: ಪುಷ್ಪಾ ಚಿತ್ರದ ಶೈಲಿಯಲ್ಲೇ ರಕ್ತಚಂದನ ಸ್ಮಗ್ಲಿಂಗ್ ಮಾಡಿ ಅದನ್ನು ತಡೆಯಲು ಬಂದ ಪೊಲೀಸರ ಮೇಲೆ ಕೊಡಲಿಗಳಿಂದ ಹಲ್ಲೆ ಮಾಡಿದ ನಟೋರಿಯಸ್ ಗ್ಯಾಂಗ್ ಅನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ರಾಪೂರ್ ಅರಣ್ಯದಲ್ಲಿ ರಕ್ತ ಚಂದನದ ಕಳ್ಳಸಾಗಾಣಿಕೆದಾರರು ‘ಪುಷ್ಪ’ ಸಿನಿಮಾದ ದೃಶ್ಯದಂತೆಯೇ ರಕ್ತ ಚಂದನ ಮರಗಳನ್ನು ಕಡಿದು ಅವುಗಳನ್ನು ಕಳ್ಳ ಸಾಗಣೆ ಮಾಡುವಾಗ ತಡೆಯಲು ಬಂದ ಪೊಲೀಸರ ಮೇಲೆ ಸಾಮೂಹಿಕವಾಗಿ ಕೊಡಲಿಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಈ ವೇಳೆ ಪೊಲೀಸರು ಬಹಳ ಚಾಕಚಕ್ಯತೆಯಿಂದ ಅವರ ದಾಳಿಯನ್ನು ವಿಫಲಗೊಳಿಸಿ ಅವರನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ರಕ್ತ ಚಂದನ ಕಡಿಯಲು 55 ಮಂದಿ ಅಂತರ್ ರಾಜ್ಯ ಸ್ಮಗ್ಲರ್ ಗಳ ಗುಂಪಿನ ಕುರಿತು ಮಾಹಿತಿ ಪಡೆದ ಪೊಲೀಸರು ಗಡಿಗಳಲ್ಲಿ ವಾಹನ ತಪಾಸಣೆಯನ್ನು ತೀವ್ರಗೊಳಿಸಿದ್ದರು. ಶನಿವಾರ ಮಧ್ಯಾಹ್ನ ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಮಿಕರು ಮತ್ತು ರಕ್ತ ಚಂದನ ಮಾಫಿಯಾ ಸದಸ್ಯರು ಇಬ್ಬರೂ ವಾಹನಗಳಲ್ಲಿ ರಕ್ತ ಚಂದನದ ಮರದ ದಿಮ್ಮಿಗಳೊಂದಿಗೆ ಪ್ರಯಾಣಿಸುತ್ತಿದ್ದರು.
ಚಿಲ್ಲಕೂರು ವಲಯದ ಬುಧಾನಂ ಗ್ರಾಮದಲ್ಲಿ ಕಳ್ಳಸಾಗಣೆದಾರರು ತಮ್ಮ ವಾಹನಗಳನ್ನು ನಿಲ್ಲಿಸಲು ಪೊಲೀಸರು ಪ್ರಯತ್ನಿಸಿದಾಗ, ಪೊಲೀಸರ ಮೇಲೆಯೇ ಸ್ಮಗ್ಲರ್ ಗಳು ಮತ್ತು ಅದರೊಳಗಿದ್ದ ಸಿಬ್ಬಂದಿ ಪೊಲೀಸರ ಮೇಲೆ ಕೊಡಲಿಗಳನ್ನು ಎಸೆದಿದ್ದಾರೆ. ಪೊಲೀಸರು ಜಾಣತನದಿಂದ ವರ್ತಿಸಿ ಜೀಪುಗಳ ಸಮೇತ ವಾಹನಗಳನ್ನು ಸುತ್ತುವರಿದು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಅವರಿಂದ 45 ಕೆಂಪು ಚಂದನದ ಮರದ ದಿಮ್ಮಿಗಳು, 24 ಕೊಡಲಿಗಳು, 31 ಸೆಲ್ಫೋನ್ಗಳು, 3 ಬ್ಯಾರಲ್ಗಳು, ಒಂದು ಲಾರಿ, ಒಂದು ಟೊಯೊಟಾ ಕಾರು ಮತ್ತು 75,230 ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ.
ಅಂತೆಯೇ ಮೂವರು ಸ್ಮಗ್ಲರ್ ಗಳು, 55 ಮಂದಿ ಕೂಲಿಕಾರ್ಮಿಕರನ್ನು ಬಂಧಿಸಿದ್ದಾರೆ. ಒಟ್ಟಾರೆ ಸಿನಿಮಾದಿಂದ ಪ್ರೇರಿತರಾಗಿ ಅದೇ ರೀತಿ ತಪ್ಪಿಸಿಕೊಂಡು ಹೋಗಬಹುದು ಎಂಬ ಕಳ್ಳರ ಉಪಾಯಕ್ಕೆ ಪೊಲೀಸರು ಸರಿಯಾದ ಉತ್ತರ ನೀಡಿ ಬಂಧಿಸಿದ್ದಾರೆ.