ಜನರ ಜೀವನಕ್ಕೆ ತೊಂದರೆಯಾಗುವುದು ಬೇಡ; ದೆಹಲಿಯಲ್ಲಿ ಶೀಘ್ರದಲ್ಲೇ ನಿರ್ಬಂಧಗಳ ತೆರವು: ಸಿಎಂ ಕೇಜ್ರಿವಾಲ್
ಜನರ ಜೀವನೋಪಾಯಕ್ಕೆ ತೊಂದರೆಯಾಗುವುದನ್ನು ತಮ್ಮ ಸರ್ಕಾರ ಬಯಸುವುದಿಲ್ಲ ಮತ್ತು ಕೋವಿಡ್ ನಿರ್ಬಂಧಗಳನ್ನು ಶೀಘ್ರಗತಿಯಲ್ಲಿ ತೆರವುಗೊಳಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.
Published: 25th January 2022 01:23 PM | Last Updated: 25th January 2022 01:41 PM | A+A A-

ದೆಹಲಿ ಸಿಎಂ ಕೇಜ್ರಿವಾಲ್
ನವದೆಹಲಿ: ಜನರ ಜೀವನೋಪಾಯಕ್ಕೆ ತೊಂದರೆಯಾಗುವುದನ್ನು ತಮ್ಮ ಸರ್ಕಾರ ಬಯಸುವುದಿಲ್ಲ ಮತ್ತು ಕೋವಿಡ್ ನಿರ್ಬಂಧಗಳನ್ನು ಶೀಘ್ರಗತಿಯಲ್ಲಿ ತೆರವುಗೊಳಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.
ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಅವರು, ಕೋವಿಡ್ ನಿಂದಾಗಿ ದೆಹಲಿ ಜನತೆ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಜೀವನೋಪಾಯಕ್ಕೆ ತೊಂದರೆಯಾಗುವುದನ್ನು ನಮ್ಮ ಸರ್ಕಾರ ಬಯಸುವುದಿಲ್ಲ. ಆದರೆ, ಜನರ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಹೀಗಾಗಿಯೇ ನಿರ್ಬಂಧಗಳನ್ನು ಹೇರಲಾಗಿತ್ತು ಎಂದು ಹೇಳಿದ್ದಾರೆ.
ಕಳೆದ ವಾರ ಕೆಲವು ವ್ಯಾಪಾರಿಗಳು ನನ್ನನ್ನು ಭೇಟಿ ಮಾಡಿದ್ದರು. ಈ ವೇಳೆ ಸಮ ಬೆಸ ನಿಯಮ ಹಾಗೂ ವಾರಾಂತ್ಯದ ಕರ್ಫ್ಯೂನಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದ್ದರು. ಲೆಫ್ಟಿನೆಂಟ್ ಗವರ್ನರ್ ಕೆಲವು ಮನವಿಗಳಿಗೆ ಒಪ್ಪಿದ್ದರೆ, ಕೆಲವುಗಳಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ಕೆಲವು ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಳಿಕ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಕುರಿತು ಮಾತನಾಡಿದ ಅವರು, ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಇನ್ನು ಮುಂದೆ ದೆಹಲಿ ಸರ್ಕಾರಿ ಕಚೇರಿಗಳಲ್ಲಿ ರಾಜಕೀಯ ನಾಯಕರ ಫೋಟೋಗಳ ಬದಲು ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಅವರ ಫೋಟೋಗಳನ್ನು ಹಾಕಲಾಗುತ್ತದೆ ಎಂದು ಘೋಷಿಸಿದ್ದಾರೆ.
ಅಂಬೇಡ್ಕರರ ಹೋರಾಟಗಳನ್ನು ಸ್ಮರಿಸಿದ ಅವರು, ಇಂಟರ್ನೆಟ್ ಇಲ್ಲದ ಕಾಲದಲ್ಲಿ ಡಾ.ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ದೇಶಕ್ಕಾಗಿ ದೊಡ್ಡ ಕನಸು ಕಾಣುವುದು ಅವರ ಜೀವನದಿಂದ ನಾವು ಕಲಿಯುವ ಪಾಠವಾಗಿದೆ. ಬಡವರು ಅಥವಾ ಶ್ರೀಮಂತ ಕುಟುಂಬದವರು ಎಂಬ ಭೇದವಿಲ್ಲದೆ ದೇಶದ ಪ್ರತಿಯೊಂದು ಮಗುವೂ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂಬುದು ಅಂಬೇಡ್ಕರ್ ಅವರ ಕನಸಾಗಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆ, ಖಾಸಗಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿಗೆ ಲೆಫ್ಟಿನೆಂಟ್ ಗವರ್ನರ್ ಅಸ್ತು
ಇಂದು ನಾವು ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುತ್ತೇವೆಂದು ಪ್ರತಿಜ್ಞೆ ಮಾಡೋಣ. ಪ್ರತೀ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡೋಣ. ನಾವು ಕಳೆದ ಏಳು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ತಂದಿದ್ದೇವೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ದೆಹಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದರು. ನಮಗೆ ನಮ್ಮ ಪ್ರಮಾಣಪತ್ರ ಸಿಕ್ಕಿದೆ ಎಂದು ತಿಳಿಸಿದ್ದಾರೆ.
2015 ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯಲ್ಲಿ ಸರ್ಕಾರವನ್ನು ರಚಿಸಿದಾಗ, ಶಿಕ್ಷಣ ಬಜೆಟ್ ಅನ್ನು ಕೇವಲ 5-10 ಪ್ರತಿಶತದಿಂದ 25 ಪ್ರತಿಶತಕ್ಕೆ ಹೆಚ್ಚಿಸಲಾಗಿತ್ತು, ನಂತರ ಎಲ್ಲಾ ಶಾಲೆಗಳ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿತ್ತು. ದೆಹಲಿ ಸರ್ಕಾರವು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವತ್ತ ಗಮನಹರಿಸುತ್ತಿದೆ ಮತ್ತು ಅದಕ್ಕಾಗಿ ಧ್ಯಾನ ಮತ್ತು ನೈತಿಕ ಕಥೆಗಳನ್ನೊಳಗೊಂಡ ತರಗತಿಗಳನ್ನು ಪ್ರಾರಂಭಿಸಿದೆ.
ನಾವು ಉದ್ಯಮಶೀಲತಾ ತರಗತಿಗಳನ್ನು ಪ್ರಾರಂಭಿಸಿದ್ದೇವೆ. ಮಕ್ಕಳು ಈಗ ಉದ್ಯೋಗವನ್ನು ಹುಡುಕಲು ಬಯಸುತ್ತಿಲ್ಲ. ಬದಲಿಗೆ ಇತರರಿಗೆ ಉದ್ಯೋಗ ನೀಡುತ್ತೇವೆಂದು ಹೇಳುತ್ತಿದ್ದಾರೆ. ಈ ಚಿಂತನೆಯ ಬದಲಾವಣೆಯು ಸ್ವತಃ ಒಂದು ದೊಡ್ಡ ಬೆಳವಣಿಗೆಯಾಗಿದೆ.
ಇದಷ್ಟೇ ಅಲ್ಲದೆ, "ನಾವು 'ದೇಶಭಕ್ತಿ' ತರಗತಿಗಳನ್ನು ಕೂಡ ಪ್ರಾರಂಭಿಸಿದ್ದೇವೆ. ದೆಹಲಿಯಲ್ಲಿ ನಾವು ಅಂತರರಾಷ್ಟ್ರೀಯ ಶಿಕ್ಷಣ ಮಂಡಳಿ 'ಐಬಿ' ಯೊಂದಿಗೆ ಒಪ್ಪಂದ ಮಾಡಿಕೊಂಡು ಶಿಕ್ಷಣ ಮಂಡಳಿಯನ್ನು ಪ್ರಾರಂಭಿಸಿದ್ದೇವೆ. ದೆಹಲಿಯಲ್ಲಿ ಶಿಕ್ಷಕರ ವಿಶ್ವವಿದ್ಯಾಲಯವನ್ನು ನಿರ್ಮಿಸುತ್ತಿದ್ದೇವೆ
ಭಗತ್ ಸಿಂಗ್ ಮತ್ತು ಡಾ ಅಂಬೇಡ್ಕರ್ ಅವರ ಮಾರ್ಗಗಳು ವಿಭಿನ್ನವಾಗಿವೆ ಆದರೆ ಅವರ ಕನಸುಗಳು ಒಂದೇ ಆಗಿವೆ. ಸಮಾನತೆ, ತಾರತಮ್ಯ ಇಲ್ಲದ ದೇಶದ ಬಗ್ಗೆ ಇಬ್ಬರೂ ಕನಸು ಕಂಡಿದ್ದರು. ಕ್ರಾಂತಿಯ ಕನಸು ಕಂಡಿದ್ದರು, ಇಂದು ಅದೇ ಕ್ರಾಂತಿ ನಮ್ಮ ಕನಸಾಗಿದೆ ಎಂದು ಹೇಳಿದರು.