
ಅಯೋಧ್ಯೆ
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈ ಬಾರಿ ಅಯೋಧ್ಯೆ ಜಿಲ್ಲೆಯತ್ತ ಎಲ್ಲರ ಗಮನ ಹೆಚ್ಚಿದೆ.
ಅಯೋಧ್ಯೆ, ರಾಮಜನ್ಮಭೂಮಿಯ ವಿಷಯವಾಗಿ ದೇಶದ ಗಮನ ಸೆಳೆದಿದ್ದ ಪ್ರದೇಶ. ಈ ಪ್ರದೇಶದಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಗಬೇಕೆಂದು ಮುಸ್ಲಿಮ್ ಸಮುದಾಯದವರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೋರ್ಟ್ ತೀರ್ಪು ಬಂದ ಬಳಿಕ ಮುಸ್ಲಿಂ ಸಮುದಾಯದವರು ಅಯೋಧ್ಯೆಯಲ್ಲಿ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಒಲವು ಹೊಂದಿದ್ದಾರೆ.
ಸ್ಥಳೀಯ ಮುಸ್ಲಿಮರು ರಾಮ ಮಂದಿರ ವಿಷಯ ಮುಗಿದ ಅಧ್ಯಾಯ ಎಂಬ ಅಭಿಪ್ರಾಯ ಹೊಂದಿದ್ದು, ರಾಜಕೀಯ ಪಕ್ಷಗಳು ರಾಮ ಮಂದಿರ ವಿಷಯದಿಂದ ಹೊರಬಂದು ಜನತೆ ಕೇಂದ್ರಿತ ವಿಷಯಗಳತ್ತ ಗಮನ ಹರಿಸಬೇಕೆಂಬ ಅಪೇಕ್ಷೆ ಹೊಂದಿದ್ದಾರೆ.
ಅಯೋಧ್ಯೆಯಲ್ಲಿ ಹಿಂದೂಗಳು ಮುಸ್ಲಿಮರು ಒಟ್ಟಿಗೆ ಜೀವಿಸುತ್ತಾರೆ. ಈಗ ಅಯೋಧ್ಯೆ ಜಿಲ್ಲೆಯಾಗಿದ್ದು ಉತ್ತಮ ರಸ್ತೆ, ಪಾರ್ಕಿಂಗ್ ಸೌಲಭ್ಯ, ಕೈಗಾರಿಕೆಗಳು ಬೇಕು ಎನ್ನುತ್ತಾರೆ ಬಾಬ್ರಿ ಮಸೀದಿಯ ಪ್ರಕರಣದಲ್ಲಿ ಮುಖ್ಯ ವಾದಿಯಾಗಿದ್ದ ಇಕ್ಬಾಲ್ ಅನ್ಸಾರಿ.
ಇಲ್ಲಿ ಸಾವಿರಾರು ಮಂದಿರಗಳಿವೆ ಈಗ ಮತ್ತೊಂದು ದೇವಾಲಯ (ರಾಮ ಮಂದಿರ) ನಿರ್ಮಾಣವಾಗುತ್ತಿದೆ, ಮುಂದಿನ ದಿನಗಳಲ್ಲಿ ನಮ್ಮ ಯುವಜನತೆಗೆ ಉದ್ಯೋಗ ಬೇಕು, ಅಯೋಧ್ಯೆ ಜಿಲ್ಲೆಯಾಗಿರುವುದರಿಂದ ಅಭಿವೃದ್ಧಿಯಾಗಬೇಕು ಎಂದು ಇಕ್ಬಾಲ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರದೇಶದಲ್ಲಿ ಈಗ ಮಂದಿರ-ಮಸೀದಿ ಎಂಬ ವಿಷಯ ಮುಗಿದುಹೋದ ಅಧ್ಯಾಯವಾಗಿದೆ. ಮುಸ್ಲಿಮರು ಕೋರ್ಟ್ ಆದೇಶದ ಬಗ್ಗೆ ಏನನ್ನೂ ಹೇಳಿಲ್ಲ. ನ್ಯಾಯಾಲಯದ ತೀರ್ಪನ್ನು ಮುಸ್ಲಿಮರು ಒಪ್ಪಿಕೊಂಡಿದ್ದಾರೆ. ಈಗ ಉದ್ಯೋಗ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡುವ ಸಮಯವಾಗಿದೆ ಎನ್ನುತ್ತಾರೆ ಅನ್ಸಾರಿ
ಇಕ್ಬಾಲ್ ಅನ್ಸಾರಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೋಗಿ ಆದಿತ್ಯನಾಥ್ ಅವರು ಗಲಭೆ ಮುಕ್ತ ರಾಜ್ಯವನ್ನಾಗಿ ಮಾಡಿದ್ದಾರೆ. 5 ವರ್ಷಗಳ ಕಾಲ ಯಾವುದೇ ಗಲಭೆ ನಡೆಯದಂತೆ ಯೋಗಿ ಆದಿತ್ಯನಾಥ್ ಅವರು ಆಡಳಿತ ನೀಡಿದ್ದಾರೆ" ಎಂದು ಹೇಳಿದ್ದಾರೆ.
ರಾಮ ಮಂದಿರ- ಬಾಬ್ರಿ ಮಸೀದಿಯ ಮತ್ತೋರ್ವ ವಾದಿಯಾಗಿದ್ದ, ರಾಮ ಜನ್ಮಭೂಮಿ ಪೊಲೀಸ್ ಠಾಣೆಯ ಪ್ರದೇಶದಲ್ಲೇ ವಾಸಿಸುವ 76 ವರ್ಷದ ಹಾಜಿ ಮೆಹ್ಬೂಬ್ ಮಾತನಾಡಿದ್ದು, ಈ ಬಾರಿ ಏನೇ ಆಗಲೀ ಸರ್ಕಾರ ಬದಲಾಗಲಿದೆ ಎಂದು ಹೇಳುತ್ತಾರೆ.
ಈ ಬಾರಿ ಸಮಾಜವಾದಿ ಪಕ್ಷಕ್ಕೆ ಉತ್ತಮ ಸಾಧ್ಯತೆಗಳಿವೆ. ಸಮಾಜವಾದಿ ಪಕ್ಷ ಜನಪರವಾದ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ ಆದ್ದರಿಂದ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಹಾಜಿ ಮೆಹ್ಬೂಬ್. ಒಟ್ಟಾರೆ ರಾಮ ಜನ್ಮಭೂಮಿಯಲ್ಲಿ ಎಲ್ಲರೂ ಅಭಿವೃದ್ಧಿಪರ ಮಾತನಾಡುತ್ತಿರುವುದು ಚುನಾವಣೆಯನ್ನು ಎದುರಿಸುವ ದೃಷ್ಟಿಯನ್ನೇ ಬದಲಾವಣೆ ಮಾಡಿದೆ.