5G ಪ್ರಕರಣ; ಜೂಹಿ ಚಾವ್ಲಾ ದಂಡವನ್ನು 20 ಲಕ್ಷ ದಿಂದ 2 ಲಕ್ಷ ರೂ. ಗೆ ಇಳಿಸಿದ ಹೈಕೋರ್ಟ್!
ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ವಿರುದ್ಧ 5ಜಿ ತಂತ್ರಜ್ಞಾನದ ಬಿಡುಗಡೆಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ 20 ಲಕ್ಷ ರೂ. ದಂಡವನ್ನು ಈಗ ಹೈಕೋರ್ಟ್ 2 ಲಕ್ಷಕ್ಕೆ ಇಳಿಸಿದೆ.
Published: 26th January 2022 12:40 AM | Last Updated: 27th January 2022 01:08 PM | A+A A-

ನಟಿ ಜೂಹಿ ಚಾವ್ಲಾ
ಮುಂಬೈ: ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ವಿರುದ್ಧ 5ಜಿ ತಂತ್ರಜ್ಞಾನದ ಬಿಡುಗಡೆಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ 20 ಲಕ್ಷ ರೂ. ದಂಡವನ್ನು ಈಗ ಹೈಕೋರ್ಟ್ 2 ಲಕ್ಷಕ್ಕೆ ಇಳಿಸಿದೆ.
ಭಾರತದಲ್ಲಿ 5ಜಿ ಅಳವಡಿಕೆ ವಿರುದ್ಧದ ಮೊಕದ್ದಮೆಗಾಗಿ ನಟಿ ಜೂಹಿ ಚಾವ್ಲಾ ಅವರಿಗೆ ಹೈಕೋರ್ಟ್ 20 ಲಕ್ಷ ರೂ ದಂಡ ವಿಧಿಸಿತ್ತು. ಇದೀಗ ಈ ದಂಡ ಪ್ರಮಾಣವನ್ನು 2 ಲಕ್ಷಕ್ಕೆ ಇಳಿಸಲು ದೆಹಲಿ ಹೈಕೋರ್ಟ್ ಮುಂದಾಗಿದೆ. ಆದರೆ ಅವರು ಸಾರ್ವಜನಿಕರಿಗಾಗಿ ಒಂದಿಷ್ಟು ಸೇವೆ ಮಾಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ. ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಜೂಹಿ ಚಾವ್ಲಾ ಸೇರಿದಂತೆ ಇತರ ಇಬ್ಬರ ಮೇಲೆ ದಂಡ ವಿಧಿಸಿತ್ತು.
ಏನಿದು ಪ್ರಕರಣ?
2021ರ ಜೂನ್ 4 ರಂದು, ಭಾರತದಲ್ಲಿ 5ಜಿ ತಂತ್ರಜ್ಞಾನದ ಜಾರಿ ವಿರುದ್ಧ ಜೂಹಿ ಚಾವ್ಲಾ ಅವರ ಸಿವಿಲ್ ಮೊಕದ್ದಮೆ ಅರ್ಜಿ ಹಾಕಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಆರ್.ಮಿಧಾ ಅವರು ಅರ್ಜಿಯನ್ನು ವಜಾಗೊಳಿಸಿದರು. ಈ ವೇಳೆ ಫಿರ್ಯಾದಿದಾರರ ಮೇಲೆ 20 ಲಕ್ಷ ರೂ. ದಂಡ ವಿಧಿಸಿದರು. ಪ್ರಚಾರಕ್ಕಾಗಿ ಈ ರೀತಿಯ ಮೊಕದ್ದಮೆ ಮಾಡಲಾಗಿದೆ ಎಂದು ನ್ಯಾಯಾಲಯವು ಕಳೆದ ವರ್ಷ ತಿಳಿಸಿತ್ತು.
ಇದನ್ನೂ ಓದಿ: 5ಜಿ ತಂತ್ರಜ್ಞಾನಕ್ಕೆ ಸ್ವಾಗತ, ಆದರೆ ಅದು ಸುರಕ್ಷಿತವೇ ಎಂಬುದನ್ನು ತಿಳಿಯಬೇಕು: ಜೂಹಿ ಚಾವ್ಲಾ
ಈ ಹಿನ್ನೆಲೆ ನಟಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದು, ಮೊಕದ್ದಮೆಯನ್ನು ವಜಾಗೊಳಿಸುವ ಏಕ ಪೀಠದ ಆದೇಶವು ಸರಿಯಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದರು. ಆದರೆ ಕಳೆದ ವರ್ಷ ಕೊರೊನಾ 2ನೇ ಅಲೆ ಇದ್ದ ಕಾರಣ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯದ ತಡೆದಿತ್ತು. ಆದರೂ ಈ ವಿಚಾರಣೆಗೆ ಜೂಹಿ ಚಾವ್ಲಾ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜಾರಾಗುತ್ತಿದ್ದರು.
ಅರ್ಜಿಯನ್ನು ವಜಾಗೊಳಿಸಿದ ನಂತರ, ಜೂಹಿ ಚಾವ್ಲಾ ಅವರು ಕೆಲವು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ, ನಾನು 5ಜಿ ತಂತ್ರಜ್ಞಾನದ ವಿರುದ್ಧವಲ್ಲ. ಈ ತಂತ್ರಜ್ಞಾನವು ಸುರಕ್ಷಿತವಾಗಿದೆ ಎಂದು ಸರ್ಕಾರದ ಸ್ಪಷ್ಟೀಕರಣವನ್ನು ಪಡೆಯಲು ಮಾತ್ರ ಅರ್ಜಿ ಹಾಕಲಾಗಿತ್ತು ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹೇಳಿದ್ದರು.