ಗೋವಾ ಚುನಾವಣೆ: ಪಣಜಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಉತ್ಪಲ್ ಪರಿಕ್ಕರ್‌ಗೆ ಶಿವಸೇನೆ ಬೆಂಬಲ
ಗೋವಾದ ಪಣಜಿ ವಿಧಾನಸಭಾ ಕ್ಷೇತ್ರದಿಂದ ಆಡಳಿತರೂಢ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೋವಾ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್...
Published: 31st January 2022 11:53 PM | Last Updated: 31st January 2022 11:53 PM | A+A A-

ಉತ್ಪಲ್ ಪರಿಕ್ಕರ್
ಪಣಜಿ: ಗೋವಾದ ಪಣಜಿ ವಿಧಾನಸಭಾ ಕ್ಷೇತ್ರದಿಂದ ಆಡಳಿತರೂಢ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೋವಾ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರಿಗೆ ಶಿವಸೇನೆ ಸೋಮವಾರ ಬೆಂಬಲ ಘೋಷಿಸಿದೆ ಮತ್ತು ಈ ಪ್ರತಿಷ್ಠಿತ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ.
ಶಿವಸೇನೆಯ ಈ ಕ್ರಮವನ್ನು ಉತ್ಪಲ್ ಪರಿಕ್ಕರ್ ಅವರು ಸ್ವಾಗತಿಸಿದ್ದಾರೆ. ಉತ್ಪಲ್ ಪರಿಕ್ಕರ್ ಅವರನ್ನು ಬೆಂಬಲಿಸಿ ಶಿವಸೇನೆ ಪಣಜಿ ಕ್ಷೇತ್ರದಿಂದ ತನ್ನ ಅಭ್ಯರ್ಥಿ ಶೈಲೇಂದ್ರ ವೆಲಿಂಗ್ಕರ್ ಅವರನ್ನು ಹಿಂಪಡೆಯುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಗೋವಾ ಚುನಾವಣೆ: ಪರಿಸ್ಥಿತಿ ನನ್ನನ್ನು ಸ್ವತಂತ್ರವಾಗಿ ಸ್ಪರ್ಧಿಸುವಂತೆ ಮಾಡಿದೆ: ಉತ್ಪಲ್ ಪರಿಕ್ಕರ್
ಬಿಜೆಪಿ ಧೀಮಂತ ಮತ್ತು ಮಾಜಿ ಸಿಎಂ ದಿವಂಗತ ಮನೋಹರ್ ಪರಿಕ್ಕರ್ ಅವರ ಹಿರಿಯ ಪುತ್ರ ಉತ್ಪಲ್ ಅವರಿಗೆ ಆಡಳಿತ ಪಕ್ಷ ಪಣಜಿಯಿಂದ ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
"ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ. ಶಿವಸೇನಾ ಪಣಜಿಯಿಂದ ತನ್ನ ಅಭ್ಯರ್ಥಿ ಶೈಲೇಂದ್ರ ವೆಲಿಂಗ್ಕರ್ ಅವರನ್ನು ಹಿಂತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ ನಮ್ಮ ಕಾರ್ಯಕರ್ತರು ಉತ್ಪಲ್ ಪರಿಕ್ಕರ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಪಣಜಿಯ ಹೋರಾಟ ಕೇವಲ ಚುನಾವಣೆ ಅಲ್ಲ. ಗೋವಾದ ರಾಜಕೀಯ ಶುದ್ಧೀಕರಣವೂ ಆಗಿದೆ" ಎಂದು ರಾವತ್ ಟ್ವೀಟ್ ಮಾಡಿದ್ದಾರೆ.