ಇಂದು ನಿಜವಾದ ಶಿವಸೈನಿಕ ಮಹಾರಾಷ್ಟ್ರ ಸಿಎಂ ಆಗಿದ್ದಾರೆ, ಇದು 'ಇಡಿ' ಸರ್ಕಾರ: ಡಿಸಿಎಂ ದೇವೇಂದ್ರ ಫಡ್ನವಿಸ್

ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಶ್ವಾಸಮತ ಯಾಚನೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ-ಶಿವಸೇನೆ ರೆಬೆಲ್ ಶಾಸಕರ ಬಣದ ಮೈತ್ರಿ ಸಿಎಂ ಏಕನಾಥ್ ಶಿಂಡೆ ಜಯಗಳಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಇಂದು ನಿಜವಾದ ಶಿವಸೈನಿಕ ಮಹಾರಾಷ್ಟ್ರ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ.
ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್

ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರ ವಿಶ್ವಾಸಮತ ಯಾಚನೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ-ಶಿವಸೇನೆ ರೆಬೆಲ್ ಶಾಸಕರ ಬಣದ ಮೈತ್ರಿ ಸಿಎಂ ಏಕನಾಥ್ ಶಿಂಡೆ ಜಯಗಳಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಇಂದು ನಿಜವಾದ ಶಿವಸೈನಿಕ ಮಹಾರಾಷ್ಟ್ರ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯುತ್ತಿದ್ದು, ಇಂದು ನಡೆದ ವಿಶ್ವಾಸಮತ ಯಾಚನೆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ನಮ್ಮ ಮೈತ್ರಿಕೂಟಕ್ಕೆ ಜನಾದೇಶ ಸಿಕ್ಕಿತ್ತು. ಆದರೆ ನಮ್ಮನ್ನು ಉದ್ದೇಶಪೂರ್ವಕವಾಗಿ ಬಹುಮತದಿಂದ ದೂರವಿಡಲಾಗಿದೆ. ಆದರೆ ಏಕನಾಥ್ ಶಿಂಧೆ ಅವರೊಂದಿಗೆ ನಾವು ಮತ್ತೊಮ್ಮೆ ಶಿವಸೇನೆಯೊಂದಿಗೆ ನಮ್ಮ ಸರ್ಕಾರವನ್ನು ರಚಿಸಿದ್ದೇವೆ. ನಿಜವಾದ ಶಿವಸೈನಿಕರನ್ನು ಸಿಎಂ ಮಾಡಲಾಗಿದೆ. ನನ್ನ ಪಕ್ಷದ ಆಜ್ಞೆಯಂತೆ ನಾನು ಉಪ ಮುಖ್ಯಮಂತ್ರಿಯಾಗಿದ್ದೇನೆ ಎಂದು ಹೇಳಿದರು. 

ಅಂತೆಯೇ, 'ಪಕ್ಷ ಹೇಳಿದ್ದರೆ ಮನೆಯಲ್ಲಿ ಕೂರುತ್ತಿದ್ದೆ. ಅದೇ ಪಕ್ಷ ನನ್ನನ್ನು ಸಿಎಂ ಮಾಡಿತ್ತು. ಇಂದು ನಾನು ನಿಮಗೆ ಹೇಳುತ್ತೇನೆ, ಈ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಎಂದಿಗೂ ಜಗಳ ನಡೆಯುವುದಿಲ್ಲ, ನಾವು ಸಹಕಾರವನ್ನು ಮುಂದುವರಿಸುತ್ತೇವೆ. ಇದು ಇಡಿ (ಜಾರಿ ನಿರ್ದೇಶನಾಲಯ) ಸರ್ಕಾರ ಎಂದು ಜನರು ಲೇವಡಿ ಮಾಡುತ್ತಿದ್ದಾರೆ. ಹೌದು, ಇದು ಏಕನಾಥ್ ದೇವೇಂದ್ರ ಅವರ ಇಡಿ ಸರ್ಕಾರ ಎಂದು ಫಡ್ನವಿಸ್ ತಿರುಗೇಟು ನೀಡಿದರು.

ಹಿಂದೊಮ್ಮೆ ನಾನು ಮತ್ತೆ ಬರುತ್ತೇನೆ ಎಂದು ಹೇಳಿದ್ದೆ. ಆದರೆ ನಾನು ಅದನ್ನು ಹೇಳಿದಾಗ, ಹಲವಾರು ಜನರು ನನ್ನನ್ನು ಅಪಹಾಸ್ಯ ಮಾಡಿದ್ದರು. ನಾನು ಇಂದು ಹಿಂತಿರುಗಿ ನನ್ನೊಂದಿಗೆ ಅವರನ್ನು (ಏಕನಾಥ್ ಶಿಂಧೆ) ಕರೆತಂದಿದ್ದೇನೆ. ನನ್ನನ್ನು ಅಪಹಾಸ್ಯ ಮಾಡಿದವರ ಮೇಲೆ ನಾನು ಸೇಡು ತೀರಿಸಿಕೊಳ್ಳುವುದಿಲ್ಲ. ನಾನು ಅವರನ್ನು ಕ್ಷಮಿಸುತ್ತೇನೆ, ರಾಜಕೀಯದಲ್ಲಿ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ರಾಜಕೀಯದಲ್ಲಿ ಎದುರಾಳಿಗಳ ಮಾತು ಕೇಳಲು ಎಲ್ಲರೂ ಸಿದ್ಧರಾಗಿರಬೇಕು. ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಪೋಸ್ಟ್ ಮಾಡಿದ್ದಕ್ಕಾಗಿ ಜನರನ್ನು ಜೈಲಿಗೆ ಹಾಕಿರುವುದನ್ನು ನಾವು ನೋಡಿದ್ದೇವೆ. ನಮ್ಮ ವಿರುದ್ಧ ಮಾತನಾಡುವವರನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ಟೀಕೆಗಳಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದು ಫಡ್ನಿವಿಸ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com