ಕಣಿವೆ ರಾಜ್ಯದಲ್ಲಿ ಮತ್ತೊಂದು ವಂಶವಾಹಿ ರಾಜಕಾರಣ: ರಾಜಕೀಯ ಅಖಾಡದಲ್ಲಿ ಮೆಹಬೂಬಾ ಪುತ್ರಿ ಇಲ್ತಿಜಾ ಮುಫ್ತಿ!

ಜಮ್ಮು ಮತ್ತು ಕಾಶ್ಮೀರ ಮತ್ತೊಂದು ವಂಶವಾಹಿ ರಾಜಕೀಯ ಉದಯಕ್ಕೆ ಸಾಕ್ಷಿಯಾಗಲಿದೆ. ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ  ರಾಜಕೀಯ ಸೇರಲು ಮುಂದಾಗಿದ್ದಾರೆ.
ಇಲ್ತಿಜಾ ಮುಫ್ತಿ
ಇಲ್ತಿಜಾ ಮುಫ್ತಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮತ್ತೊಂದು ವಂಶವಾಹಿ ರಾಜಕೀಯ ಉದಯಕ್ಕೆ ಸಾಕ್ಷಿಯಾಗಲಿದೆ. ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ರಾಜಕೀಯ ಸೇರಲು ಮುಂದಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ದುರ್ಬಲಗೊಂಡಿರುವ ಪಕ್ಷವನ್ನು ನಡೆಸಲು ತನ್ನ ತಾಯಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಮೆಹಬೂಬಾ ಅವರ ಕಿರಿಯ ಮಗಳು 35 ವರ್ಷದ ಇಲ್ತಿಜಾ ಮುಫ್ತಿ ಅವರ 2.20 ನಿಮಿಷಗಳ ವೀಡಿಯೊವನ್ನು ಪಿಡಿಪಿ ತನ್ನ ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿದೆ.

ವೀಡಿಯೊದಲ್ಲಿ, ಅವರು ವಲಸೆ ಕಾಶ್ಮೀರಿ ಪಂಡಿತರು, ಅಮರನಾಥ ಯಾತ್ರೆ ಮತ್ತು ಸರ್ಕಾರದಿಂದ ಶಾಲೆಗಳನ್ನು ಮುಚ್ಚುವ ಬಗ್ಗೆ ಮಾತನಾಡಿದ್ದಾರೆ. ತಾಯಿ ಮೆಹಬೂಬಾ ಮುಫ್ತಿ ಬಂಧನದಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಇಲ್ತಿಜಾ ರಾಜಕೀಯ ರಂಗಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ.

ಆಗಸ್ಟ್ 5, 2019 ರಂದು ಕೇಂದ್ರದಿಂದ ಜಮ್ಮು ಮತ್ತು ಕಾಶ್ಮೀರ ವಿಭಜನೆಗೆ ಕಾರಣವಾದ ಆರ್ಟಿಕಲ್ 370 ಮತ್ತು 35 ಎ ರದ್ದತಿಯ ನಂತರ ಇಲ್ತಿಜಾ ಸಕ್ರಿಯರಾಗಿದ್ದಾರೆ. ಕಣಿವೆ ರಾಜ್ಯಗಳಲ್ಲಿ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವುದನ್ನು ವಿರೋಧಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತನ್ನ ತಾಯಿಯ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಇಲ್ತಿಜಾ ಅಕ್ಟೋಬರ್ 2020 ರಲ್ಲಿ ಮೆಹಬೂಬಾ ಮುಫ್ತಿ ಬಂಧನಕ್ಕೊಳಗಾದ 14 ತಿಂಗಳ ನಂತರ ತನ್ನ ತಾಯಿಯ ಬಿಡುಗಡೆಯಾಗುವವರೆಗೂ ಟ್ನಿಟ್ಟರ್ ಹ್ಯಾಂಡಲ್ ಮಾಡುತ್ತಿದ್ದರು. ಇಂಟರ್ ನ್ಯಾಷನಲ್ ರಿಲೇಶನ್ ಶಿಪ್ ನಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಇಲ್ತಿಜಾ ಅವರು ಉತ್ತಮ ವಾಕ್ಚಾತುರ್ಯ ಹೊಂದಿದ್ದಾರೆ. ತಾಯಿಯ ಬಿಡುಗಡೆಯ ನಂತರ ಅವರು ರಾಜಕೀಯಕ್ಕೆ ಧುಮುಕುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಲ್ತಿಜಾಗೆ ಕಳೆದ ವರ್ಷದವರೆಗೂ ರಾಜಕೀಯ ಸೇರಲು ಇಷ್ಟವಿರಲಿಲ್ಲ ಎಂದು ಪಿಡಿಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಆದರೆ ಮೆಹಬೂಬಾ ಆಕೆಯನ್ನು ಸಕ್ರಿಯ ರಾಜಕಾರಣಕ್ಕೆ ಸೇರುವಂತೆ ಮನವೊಲಿಸುತ್ತಿದ್ದರು ಎಂದು ತಿಳಿದು ಬಂದಿದೆ.  ಮೈನ್ ಸ್ಟ್ರೀಮ್ ಪಾಲಿಟಿಕ್ಸ್ ಗೆ ಸೇರುವಂತೆ ಯುವಜನರಿಗೆ ಮನವಿ ಮಾಡುವಾಗ ಮೆಹಬೂಬಾ ಅವರು ಅದನ್ನು ಮನೆಯಿಂದಲೇ ಏಕೆ ಪ್ರಾರಂಭಿಸಬಾರದು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ತಾಯಿಯ ಮನವೊಲಿಕೆಯ ನಂತರ ಇಲ್ತಿಜಾ ರಾಜಕೀಯಕ್ಕೆ ಸೇರಲು ಒಪ್ಪಿಕೊಂಡಿದ್ದಾರೆ ಎಂದು ಪಿಡಿಪಿ ಮೂಲಗಳು ತಿಳಿಸಿವೆ.

ತಮ್ಮ ತಾಯಿಯ ರಾಜಕೀಯ ನೆರವಿನಿಂದ ಮುನ್ನಲೆಗೆ ಬರುವ ಬದಲು, ಸಕ್ರಿಯ ರಾಜಕೀಯಕ್ಕೆ ಧುಮುಕುವ ಮೊದಲು ತಮ್ಮದೇ ಆದ ಜಾಗವನ್ನು ಸೃಷ್ಟಿಸಲು ಮತ್ತು ರಾಜಕೀಯದಲ್ಲಿ ತಮ್ಮದೇ ಆದ ಮೌಲ್ಯವನ್ನು ಹೊಂದಲು ಇಲ್ತಿಜಾ ಬಯಸುತ್ತಾರೆ ಎಂದು ತಿಳಿದು ಬಂದಿದೆ.

ಪಕ್ಷದ ಯುವ ನಾಯಕರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿರುವ ಇಲ್ತಿಜಾ ಪಕ್ಷವನ್ನು ಬಲಪಡಿಸುವುದು ಮತ್ತು ಅದರ ಬೆಂಬಲದ ನೆಲೆಯನ್ನು ಹೆಚ್ಚಿಸುವುದು ಹೇಗೆ ಎಂಬುದರ ಕುರಿತು ಸಲಹೆಗಳನ್ನು ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com