ಅಮರನಾಥ ಗುಹೆ ಬಳಿ ಮೇಘಸ್ಫೋಟ: 13 ಯಾತ್ರಿಗಳ ಸಾವು, ಐವರು ರಕ್ಷಣೆ, 30 ಮಂದಿ ನಾಪತ್ತೆ 

ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿನ ಪ್ರಸಿದ್ಧ ಯಾತ್ರಾ ತಾಣ ಅಮರನಾಥ ಗುಹೆ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಮೇಘ ಸ್ಫೋಟದಲ್ಲಿ ಕನಿಷ್ಠ 13 ಯಾತ್ರಿಗಳು ಸಾವನ್ನಪ್ಪಿದ್ದಾರೆ.
ಅಮರನಾಥ ಗುಹೆ ಬಳಿ ಮೇಘಸ್ಫೋಟ
ಅಮರನಾಥ ಗುಹೆ ಬಳಿ ಮೇಘಸ್ಫೋಟ

ಶ್ರೀನಗರ: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿನ ಪ್ರಸಿದ್ಧ ಯಾತ್ರಾ ತಾಣ ಅಮರನಾಥ ಗುಹೆ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಮೇಘ ಸ್ಫೋಟದಲ್ಲಿ ಕನಿಷ್ಠ 13 ಯಾತ್ರಿಗಳು ಸಾವನ್ನಪ್ಪಿದ್ದಾರೆ.

ಮೇಘಸ್ಫೋಟದಿಂದಾಗಿ 25 ಟೆಂಟ್ ಗಳು ಹಾಗೂ ಮೂವರು ಕಮ್ಯೂನಿಟಿ ಕಿಚನ್ ಗಳಿಗೆ ಹಾನಿಯಾಗಿದೆ ಎಂದು ಪೊಲೀಸ್ ಮತ್ತು ಎನ್ ಡಿಆರ್ ಎಫ್ ಸಿಬ್ಬಂದಿ ಹೇಳಿದ್ದಾರೆ. ಐವರನ್ನು ರಕ್ಷಿಸಲಾಗಿದ್ದು, 30-35 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕೃತ ಮೂಲಗಳು ಹೇಳಿವೆ.

ಧಾರಾಕಾರ ಮಳೆಯ ನಂತರ ಸಂಜೆ 5-30ರ ಸುಮಾರಿನಲ್ಲಿ ಗುಹೆ ಪ್ರದೇಶದಲ್ಲಿ ಮೇಘಸ್ಫೋಟವಾಗಿದೆ. ದಿಢೀರ್ ಉಂಟಾದ ಪ್ರವಾಹದ ನೀರು ದೇವಾಲಯದ ಹೊರಗಿನ ಬೇಸ್ ಕ್ಯಾಂಪ್ ಗೆ ನುಗ್ಗಿದ್ದು, 25 ಟೆಂಟ್ ಗಳು ಹಾಗೂ ಮೂರು ಕಮ್ಯೂನಿಟಿ ಕಿಚನ್ ಗಳಿಗೆ ಹಾನಿಯಾಗಿದೆ. ಅಲ್ಲಿ ಯಾತ್ರಾರ್ಥಿಗಳಿಗೆ ಆಹಾರ ಪೂರೈಸಲಾಗುತಿತ್ತು ಎಂದು ಅವರು ತಿಳಿಸಿದ್ದಾರೆ.

ಎನ್ ಡಿಆರ್ ಎಫ್ ನ ಮೂರು ತಂಡಗಳು ಸೇರಿದಂತೆ 75 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಎನ್ ಡಿಆರ್ ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ದುರಂತದಿಂದಾಗಿ ಅಮಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ. 

ಕೇಂದ್ರಾಡಳಿತ ಪ್ರದೇಶದ ಆಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು, ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ತಂಡಗಳು ಸಾಧ್ಯವಿರುವ ಎಲ್ಲಾ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಕೇಂದ್ರ ಸಚಿವ ಡಾ. ಜೀತೇಂದ್ರ ಸಿಂಗ್ ಸ್ಪಷ್ಪಪಡಿಸಿದ್ದಾರೆ.

ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಮಳೆ ಈಗಲೂ ಮುಂದುವರೆದಿದೆ. ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ ಮಳೆ ನಿಂತರೆ ನಾಳೆಯಿಂದ ಯಾತ್ರೆ ಪುನರ್ ಆರಂಭವಾಗಲಿದೆ ಎಂದು ಐಟಿಬಿಪಿ ಪಿಆರ್ ಒ ವಿವೇಕ್ ಕುಮಾರ್ ಪಾಂಡೆ ಹೇಳಿದ್ದಾರೆ. 

ಮೇಘಸ್ಫೋಟ ಹಿನ್ನೆಲೆಯಲ್ಲಿ ರಕ್ಷಣಾ ತಂಡಗಳು ತುರ್ತು ಸಹಾಯವಾಣಿ ನಂಬರ್ ನೀಡಿವೆ. ಎನ್ ಡಿಆರ್ ಎಫ್  011-23438252, 011-23438253, ಕಾಶ್ಮೀರ ವಿಭಾಗೀಯ ಸಹಾಯವಾಣಿ  0194-2496240, ದೇವಾಲಯ ಆಡಳಿತ ಮಂಡಳಿ ಸಹಾಯವಾಣಿ  0194-2313149 ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com