'ನನ್ನ ಆತ್ಮೀಯ ಸ್ನೇಹಿತ, ಭಾರತ-ಜಪಾನ್ ಸ್ನೇಹದ ಕೊಂಡಿ' ಎಂದು ಕಂಬನಿ ಮಿಡಿದ ಮೋದಿ: ಶಿಂಜೊ ಅಬೆ- ಭಾರತದ ಸಂಬಂಧ ಹೇಗಿತ್ತು?

ನಿನ್ನೆ ಅಂದರೆ ಶುಕ್ರವಾರ ಇಡೀ ವಿಶ್ವದ ನಾಯಕರು ಆಘಾತಕ್ಕೊಳಗಾಗುವ ಘಟನೆ ನಡೆದು ಹೋಯಿತು. ಜಪಾನ್ ನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆಯವರ ಹತ್ಯೆಯಾಗಿದೆ. 
ಜಪಾನ್ ನ ಒಸಾಕದಲ್ಲಿ ಶಿಂಜೊ ಅಬೆಯವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದ ಸಂದರ್ಭ
ಜಪಾನ್ ನ ಒಸಾಕದಲ್ಲಿ ಶಿಂಜೊ ಅಬೆಯವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದ ಸಂದರ್ಭ

ನವದೆಹಲಿ: ನಿನ್ನೆ ಅಂದರೆ ಶುಕ್ರವಾರ ಇಡೀ ವಿಶ್ವದ ನಾಯಕರು ಆಘಾತಕ್ಕೊಳಗಾಗುವ ಘಟನೆ ನಡೆದು ಹೋಯಿತು. ಜಪಾನ್ ನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆಯವರ (RIP Shinzo Abe)ಹತ್ಯೆಯಾಗಿದೆ. 

ಚೀನಾ ಭಯಭೀತಿಗೊಳ್ಳುವ ನಾಲ್ಕು ದೇಶಗಳಾದ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತದ ಭದ್ರತೆಗಾಗಿ ರಚಿಸಲಾಗಿರುವ ಕ್ವಾಡ್ ಗೆ ವರ್ಷಗಳ ಹಿಂದೆಯೇ ನಿನ್ನೆ ಹತ್ಯೆಗೀಡಾದ ಶಿಂಜೊ ಅಬೆ ಅರ್ಥ ಕಲ್ಪಿಸಿದ್ದರು. ಈ ಮೂಲಕ ಚೀನಾ ವಿರೋಧಿ ಭಾರತಕ್ಕೆ ಶಿಂಜೊ ಅಬೆ ಹತ್ತಿರವಾದರು. ಎಷ್ಟೆಂದರೆ ನಿನ್ನೆ ಗುಂಡಿನ ದಾಳಿ ಅಬೆಯವರ ಮೇಲೆ ನಡೆಯಿತು ಎಂದು ಗೊತ್ತಾದಾಗಲೇ ಸಂದೇಶ ಹಾಕಿದ್ದ ಪ್ರಧಾನಿ ಮೋದಿ (PM Narendra Modi) ನನ್ನ ಆತ್ಮೀಯ ಸ್ನೇಹಿತ ಅಬೆ ಎಂದೇ ಸಂಬೋಧಿಸಿದ್ದರು. ಒಂದರ್ಥದಲ್ಲಿ ಭಾರತ-ಜಪಾನ್ ಸ್ನೇಹಕ್ಕೆ ಕನ್ನಡಿಯಂತೆ ಶಿಂಜೊ ಅಬೆಯಿದ್ದರು.

ಇಂಡೊ-ಫೆಸಿಫಿಕ್ ಪ್ರಾಂತ್ಯದಲ್ಲಿ ಸಾರ್ವಭೌಮತ್ವ ಸ್ಥಾಪಿಸಲು ಪ್ರಯತ್ನಿಸುತ್ತಿದ್ದ ಚೀನಾಕ್ಕೆ ಪ್ರಜಾಸತ್ತಾತ್ಮಕವಾಗಿ ಸಮತೋಲನ ಹೊಂದಿದ ದೇಶ ಭಾರತ ಎಂದು ಜಪಾನ್ ನ ನಾಯಕ ಶಿಂಜೊ ಅಬೆಗೆ ಮನವರಿಕೆಯಾಗಿತ್ತು. ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದಲ್ಲಿ ಭಾರತ-ಜಪಾನ್ ಸಂಬಂಧವನ್ನು ಎತ್ತರಕ್ಕೆ ಕೊಂಡೊಯ್ಯಲು ಶಿಂಜೊ ಅಬೆಯವರು ಸಾಕಷ್ಟು ಕೊಡುಗೆಯನ್ನು ನೀಡಿದ್ದರು. ಇಂದು ಜಪಾನೀಯರ ದುಃಖದಲ್ಲಿ ಭಾರತವೂ ಭಾಗಿಯಾಗಿದೆ. ಅಬೆಯವರ ಹಠಾತ್ ನಿಧನ ಗೌರವಾರ್ಥ ಭಾರತದಲ್ಲಿ ಇಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. 

ಅಬೆ ಅವರೊಂದಿಗಿನ ತಮ್ಮ ಕೊನೆಯ ಸಂವಾದದ ಬಗ್ಗೆ ಮೋದಿ ತೀವ್ರ ತುಡಿತ ಹಂಬಲದಿಂದ ಹೇಳುತ್ತಾರೆ. ಜಪಾನ್‌ಗೆ ನನ್ನ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ, ಮತ್ತೊಮ್ಮೆ ಅಬೆ ಅವರನ್ನು ಭೇಟಿ ಮಾಡಲು ಮತ್ತು ಅನೇಕ ವಿಷಯಗಳನ್ನು ಚರ್ಚಿಸಲು ನನಗೆ ಅವಕಾಶ ಸಿಕ್ಕಿತು. ಅವರೊಬ್ಬ ಬುದ್ಧಿವಂತ ಮತ್ತು ಒಳನೋಟವುಳ್ಳ ನಾಯಕ. ಅದುವೇ ನಮ್ಮ ಕೊನೆಯ ಭೇಟಿಯಾಗುತ್ತದೆ ಎಂದು ತಿಳಿದಿರಲಿಲ್ಲ ಎಂದು ಮೋದಿ ಭಾವುಕರಾಗಿ ಹೇಳಿದ್ದಾರೆ. ಯುದ್ಧ ನಂತರ ಜಪಾನ್ ಶಾಂತಿಯುತ ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತಿತ್ತು.

ಚೀನಾ ಹೇಗೆ ಜಪಾನ್ ಗೆ ಶತ್ರು?: ಚೀನಾ ತನ್ನ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದಂತೆ ಬಾಹ್ಯವಾಗಿ ಜಪಾನ್ ಗೆ ಬೆದರಿಕೆಯೊಡ್ಡುತ್ತಿತ್ತು, ಅಪಾಯಕಾರಿ ದೇಶವೆನಿಸಿತು. ಜಪಾನ್ ಸಂಸತ್ತಿಗೆ (Japan parliament) ಸಂಸದನಾಗಿ ಪ್ರವೇಶಿಸಿದ ಅಬೆ ನಂತರ 2005ರಲ್ಲಿ ಪ್ರಧಾನಿ ಜುನಿಚಿರೊ ಕ್ಯೊಝುಮಿಯವರ ಕೆಳಗೆ ಪ್ರಧಾನ ಸಂಪುಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ದೇಶದ ಪ್ರಧಾನಿಯಾದರು. ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಚೀನಾ ತನ್ನ ಪಾರುಪತ್ಯ ಸ್ಥಾಪಿಸುತ್ತಿದ್ದಂತೆ ಅದನ್ನು ಎದುರಿಸುವ ಕುಶಲತೆಯನ್ನು ಶಿಂಜೊ ಅಬೆ ಹುಡುಕುತ್ತಿದ್ದರು.

ಜಪಾನ್ ದೇಶಕ್ಕೆ ಅಬೆಯವರ ಕೊಡುಗೆಯೇನು? ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆಯಲ್ಲಿ ಅಬೆ ಅವರ ಪಾತ್ರವು ಮುಖ್ಯವಾಗಿದ್ದು ಮುಕ್ತ ವ್ಯಾಪಾರ ಮಾರ್ಗವನ್ನು ಮಾಡಿಕೊಟ್ಟರು, ಇದು ಅವರ ಪ್ರಮುಖ ಜಾಗತಿಕ ಕೊಡುಗೆಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಗೆ ಭಾರತದ ಮಾಜಿ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ದೆಹಲಿಯಲ್ಲಿ ನಡೆದ ಅಬೆ-ಮೋದಿ ಭೇಟಿಯನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.

ಅಬೆ ಅವರು 2014 ರಲ್ಲಿ ಪಿಎಂ ಮೋದಿಯವರಿಗೆ ವೈಯಕ್ತಿಕ ಚಹಾ ಸಮಾರಂಭವನ್ನು ಆಯೋಜಿಸಿದ್ದರು. ತಮ್ಮ ಇದು ಭಾರತ-ಜಪಾನ್ ನಡುವಣ ಸೌಹಾರ್ದದ ಪ್ರತೀಕವಾಗಿತ್ತು ಎಂದು ಅಕ್ಬರುದ್ದೀನ್ ಹೇಳುತ್ತಾರೆ. ಅಬೆ ಅವರು ಮೊದಲ ಬಾರಿಗೆ ಜಪಾನ್ ಪ್ರಧಾನಿಯಾಗಿದ್ದ ವೇಳೆ 2007 ರಲ್ಲಿ ಭಾರತಕ್ಕೆ ಬಂದು ಇಲ್ಲಿ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಹೊಸ ಭದ್ರತೆಯ ಜಾಗೃತಿಯ ಬಗ್ಗೆ ಮಾತನಾಡಿದ್ದರು. 

ನಾವು ಈಗ ಐತಿಹಾಸಿಕವಾಗಿ ಮತ್ತು ಭೌಗೋಳಿಕವಾಗಿ ಎಲ್ಲಿ ನಿಂತಿದ್ದೇವೆ, ಈ ಪ್ರಶ್ನೆಗೆ ಉತ್ತರಿಸಲು, ನಾನು 1655 ರಲ್ಲಿ ಮೊಘಲ್ ರಾಜಕುಮಾರ ದಾರಾ ಶಿಕೋ ಬರೆದ ಪುಸ್ತಕದ ಶೀರ್ಷಿಕೆಯನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಭಾರತ-ಜಪಾನ್ ನಡುವೆ ಎರಡು ಸಮುದ್ರಗಳು ಹತ್ತಿರ ಬಂದಿವೆ. ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರವು ಈಗ ಸ್ವಾತಂತ್ರ್ಯ ಮತ್ತು ಸಮೃದ್ಧಿಯ ಸಮುದ್ರಗಳಾಗಿ ಕ್ರಿಯಾತ್ಮಕ ಜೋಡಣೆಯನ್ನು ತರುತ್ತಿದೆ. ಭೌಗೋಳಿಕ ಗಡಿಗಳನ್ನು ಒಡೆದ ವಿಶಾಲವಾದ ಏಷ್ಯಾ ಈಗ ವಿಭಿನ್ನ ಸ್ವರೂಪವನ್ನು ಪಡೆದುಕೊಳ್ಳಲು ಪ್ರಾರಂಭಿಸಿದೆ. ನಮ್ಮ ಎರಡು ದೇಶಗಳು ಸಾಮರ್ಥ್ಯ ಮತ್ತು ಜವಾಬ್ದಾರಿಯನ್ನು ಹೊಂದಿವೆ. ಇದು ಇನ್ನೂ ವಿಸ್ತಾರವಾಗುವುದನ್ನು ನೋಡಲು ಬಯಸುತ್ತೇನೆ ಎಂದು ಅಂದು ಶಿಂಜೊ ಅಬೆ ಭಾಷಣದಲ್ಲಿ ಹೇಳಿದ್ದರು.

ಶಿಂಜೊ ಅಬೆ ಮತ್ತು ಭಾರತದ ಸಂಬಂಧ: 2006ರಲ್ಲಿ ವಾರ್ಷಿಕ ಪ್ರಧಾನ ಮಂತ್ರಿ ಶೃಂಗಸಭೆಗಳ ನಿಬಂಧನೆಯೊಂದಿಗೆ ಭಾರತ-ಜಪಾನ್ ಸಂಬಂಧವನ್ನು ಜಾಗತಿಕ ಮತ್ತು ಕಾರ್ಯತಂತ್ರದ ಸಹಭಾಗಿತ್ವಕ್ಕೆ ಉನ್ನತ ಮಟ್ಟಕ್ಕೇರಿಸಲಾಯಿತು. 

2007 ರಲ್ಲಿ ಅಬೆ ಭಾರತೀಯ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಜಪಾನಿನ ಪ್ರಧಾನಿ ಎನಿಸಿದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಬೆ ಅವರ ತಾಯಿಯ ತಂದೆ ಅಜ್ಜ, ಆಗಿನ ಜಪಾನ್ ಪ್ರಧಾನಿ ನೊಬುಸುಕೆ ಕಿಶಿ ಅವರಿಗೆ 1957 ರಲ್ಲಿ ದೆಹಲಿಯಲ್ಲಿ ಆತಿಥ್ಯ ನೀಡಿದ್ದರು ಎಂದು ನೆನಪಿಸಿಕೊಂಡಿದ್ದರು. 

2014ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಶಿಂಜೊ ಅಬೆ ಮುಖ್ಯ ಅತಿಥಿಯಾಗಿದ್ದರು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜಪಾನ್ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳು ತಮ್ಮ ಸಂಬಂಧವನ್ನು 'ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ'ಗೆ ನವೀಕರಿಸಿದವು.

2017ರಲ್ಲಿ ಶಿಂಜೊ ಅಬೆ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಅಹಮದಾಬಾದ್‌ನಲ್ಲಿ ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಅಡಿಪಾಯವನ್ನು ಹಾಕಿದರು; 508-ಕಿಲೋ ಮೀಟರ್ ಉದ್ದದ ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ನ್ನು ಜಪಾನ್ ಬೆಂಬಲದೊಂದಿಗೆ 1.1 ಟ್ರಿಲಿಯನ್ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

2021ರಲ್ಲಿ ಅಬೆ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com