'ತಾಳಿ ತೆಗೆದಿಡುವುದು ಕ್ರೂರತೆಯ ಪರಮಾವಧಿ': ವಿಚ್ಛೇದನಕ್ಕೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್!

ಗಂಡನಿಂದ ದೂರವಾದ ಪತ್ನಿಯು ಮಾಂಗಲ್ಯ (ಮಂಗಳಸೂತ್ರ)ವನ್ನು ತೆಗೆದಿಡುವುದು ಕ್ರೂರತೆಯ ಪರಮಾವಧಿ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ದಂಪತಿಗಳ ವಿಚ್ಛೇದನಕ್ಕೆ ಅನುಮತಿ ಕೂಡ ನೀಡಿದೆ.
ಮದ್ರಾಸ್ ಹೈಕೋರ್ಟ್ ಮತ್ತು ತಾಳಿ
ಮದ್ರಾಸ್ ಹೈಕೋರ್ಟ್ ಮತ್ತು ತಾಳಿ

ಚೆನ್ನೈ: ಗಂಡನಿಂದ ದೂರವಾದ ಪತ್ನಿಯು ಮಾಂಗಲ್ಯ (ಮಂಗಳಸೂತ್ರ)ವನ್ನು ತೆಗೆದಿಡುವುದು ಕ್ರೂರತೆಯ ಪರಮಾವಧಿ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ದಂಪತಿಗಳ ವಿಚ್ಛೇದನಕ್ಕೆ ಅನುಮತಿ ಕೂಡ ನೀಡಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ವಿಎಂ ವೇಲುಮಣಿ ಮತ್ತು ಎಸ್ ಸೌಂಥರ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯಪಟ್ಟಿದ್ದು, 'ತಾಳಿ ತೆಗೆದಿಟ್ಟರೆ ಅದರಿಂದ ಗಂಡನಿಗೆ ಮಾನಸಿಕ ಹಿಂಸೆಯಾಗುತ್ತದೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬನಿಗೆ ಡೈವೋರ್ಸ್​ ಪಡೆಯಲು ಅನುಮತಿ ನೀಡಿದೆ. ಪತ್ನಿ ಮಾಂಗಲ್ಯ (Mangalya) ಧರಿಸುತ್ತಿಲ್ಲ ಎಂಬುದನ್ನೂ ಒಂದು ಆಧಾರವಾಗಿಟ್ಟುಕೊಂಡು ನೊಂದ ವ್ಯಕ್ತಿಗೆ ಕೋರ್ಟ್​ ವಿಚ್ಛೇದನಕ್ಕೆ (Divorce) ಒಪ್ಪಿಗೆ ನೀಡಿದೆ.

ಏನಿದು ಘಟನೆ?
ಈರೋಡ್‌ನ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಶಿವಕುಮಾರ್ ಅವರ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಎಂ ವೇಲುಮಣಿ ಮತ್ತು ಎಸ್ ಸೌಂಥರ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ತನಗೆ ವಿಚ್ಛೇದನ ನೀಡಲು ನಿರಾಕರಿಸಿದ ಸ್ಥಳೀಯ ಕೌಟುಂಬಿಕ ನ್ಯಾಯಾಲಯದ 2016 ಜೂನ್ 15ರ ಆದೇಶಗಳನ್ನು ರದ್ದುಗೊಳಿಸುವಂತೆ ಶಿವಕುಮಾರ್ ಅವರು ಕೋರಿದ್ದರು.

ಈ ಬಗ್ಗೆ ಮಹಿಳೆಯ ವಿಚಾರಣೆ ನಡೆಸಿದಾಗ ಆಕೆ ಗಂಡನಿಂದ ದೂರವಿದ್ದ ಸಮಯದಲ್ಲಿ ಮಾಂಗಲ್ಯವನ್ನು ತೆಗೆದಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾಳೆ. ತಾನು ತಾಳಿಯನ್ನು ಇನ್ನೂ ಇಟ್ಟುಕೊಂಡಿದ್ದೇನೆ. ಆದರೆ, ಅದರ ಜೊತೆಗಿದ್ದ ಕರಿಮಣಿ ಸರವನ್ನು ಮಾತ್ರ ತೆಗೆದಿದ್ದೇನೆ ಎಂದು ಆಕೆ ವಿವರಿಸಲು ಮುಂದಾದಳು. ಆಗ, ಮಾಂಗಲ್ಯವನ್ನು ತೆಗೆದುಹಾಕುವ ಕ್ರಿಯೆಗೆ ತನ್ನದೇ ಆದ ಮಹತ್ವವಿದೆ ಎಂದು ಕೋರ್ಟ್​ ಹೇಳಿದೆ. ತಾಳಿ ತೆಗೆದಿಡುವುದೂ ಕೂಡ ಕ್ರೂರತೆಯ ಪರಮಾವಧಿ ಎಂದು ನ್ಯಾಯಲಯ ಹೇಳಿದೆ. ಆಕೆಯ ವಕೀಲರು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಅನ್ನು ಉಲ್ಲೇಖಿಸಿ ಮಾತನಾಡಿದ್ದು, ವಿವಾಹಿತ ಮಹಿಳೆ ತಾಳಿ ಕೊಟ್ಟಿಕೊಳ್ಳಲೇಬೇಕೆಂಬ ನಿಯಮವಿಲ್ಲ ಎಂದು ಹೇಳಿದ್ದಾರೆ. ಮಾಂಗಲ್ಯ ಹಾಕಿಕೊಳ್ಳುವುದು ಅಥವಾ ತೆಗೆದಿಡುವುದು ವೈವಾಹಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದಿಸಿದ್ದಾರೆ.

ಆದರೆ, ಈ ಭಾಗದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ತಾಳಿ ಕಟ್ಟುವುದು ಅತ್ಯಗತ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಯಾವುದೇ ವಿವಾಹಿತ ಮಹಿಳೆ ತಾಳಿಯನ್ನು ತೆಗೆದು ಬ್ಯಾಂಕ್ ಲಾಕರ್​​ನಲ್ಲಿ ಇಡುವುದಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ.

“ಮಹಿಳೆಯ ಕುತ್ತಿಗೆಯಲ್ಲಿರುವ ತಾಳಿ ಪವಿತ್ರವಾದ ವಿಷಯವಾಗಿದ್ದು, ಅದು ವೈವಾಹಿಕ ಜೀವನದ ನಿರಂತರತೆಯನ್ನು ಸಂಕೇತಿಸುತ್ತದೆ. ಅದನ್ನು ಗಂಡನ ಮರಣದ ನಂತರ ಮಾತ್ರ ತೆಗೆದುಹಾಕಲಾಗುತ್ತದೆ. ಆದ್ದರಿಂದ, ಅರ್ಜಿದಾರರ ಹೆಂಡತಿ ಮಾಂಗಲ್ಯವನ್ನು ತೆಗೆದುಹಾಕುವ ಮೂಲಕ ಗಂಡನಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಹೇಳಬಹುದು ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಪೊಲೀಸರ ಎದುರು ಆ ಮಹಿಳೆ ತನ್ನ ಗಂಡನಿಗೆ ಮಹಿಳಾ ಸಹೋದ್ಯೋಗಿಗಳೊಂದಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಗಳನ್ನು ಮಾಡಿದ್ದಾಳೆ ಎಂದು ಪೀಠವು ಗಮನಿಸಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ತೀರ್ಪಿನ ಹಿನ್ನೆಲೆಯಲ್ಲಿ ಪತ್ನಿಯು ಪತಿಗೆ ಮಾನಸಿಕ ಹಿಂಸೆಯನ್ನು ಉಂಟುಮಾಡಿದ್ದಾಳೆ ಎಂದು ಹೇಳಲು ಯಾವುದೇ ಅನುಮಾನವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಮೇಲ್ಮನವಿದಾರ ಮತ್ತು ಅವರ ಪತ್ನಿ 2011ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ಅವಧಿಯಲ್ಲಿ ಪತ್ನಿ ಪುನರ್ಮಿಲನಕ್ಕೆ ಪ್ರಯತ್ನವನ್ನು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಪ್ರಕರಣದ ಸತ್ಯಗಳು ಮತ್ತು ಸನ್ನಿವೇಶಗಳಲ್ಲಿ ಮತ್ತು ಹೆಂಡತಿಯು ತನ್ನ ಕೃತ್ಯದಿಂದ ಪತಿಗೆ ಮಾನಸಿಕ ಕ್ರೌರ್ಯವನ್ನುಂಟುಮಾಡಿದ್ದಾಳೆಂದು ನಾವು ಗಮನಿಸಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com