ಮೇಯರ್ ಗೆಲುವಿನೊಂದಿಗೆ ಮಧ್ಯಪ್ರದೇಶಕ್ಕೆ ಎಎಪಿ ಪದಾರ್ಪಣೆ!

ಸಿಂಗ್ರೌಲಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಾಣಿ ಅಗರವಾಲ್ 9,300 ಮತಗಳಿಂದ ಜಯಗಳಿಸುವುದರೊಂದಿಗೆ ಆಮ್ ಆದ್ಮಿ ಪಕ್ಷವು ಮಧ್ಯಪ್ರದೇಶ ರಾಜಕೀಯಕ್ಕೆ ಪ್ರವೇಶ ಮಾಡಿದೆ.
ರಾಣಿ ಅಗರವಾಲ್-ಕೇಜ್ರಿವಾಲ್
ರಾಣಿ ಅಗರವಾಲ್-ಕೇಜ್ರಿವಾಲ್

ಭೋಪಾಲ್: ಸಿಂಗ್ರೌಲಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಾಣಿ ಅಗರವಾಲ್ 9,300 ಮತಗಳಿಂದ ಜಯಗಳಿಸುವುದರೊಂದಿಗೆ ಆಮ್ ಆದ್ಮಿ ಪಕ್ಷವು ಮಧ್ಯಪ್ರದೇಶ ರಾಜಕೀಯಕ್ಕೆ ಪ್ರವೇಶ ಮಾಡಿದೆ.

ರಾಣಿ ಅಗರವಾಲ್ ಅವರು ನಿರ್ಗಮಿತ ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಷನ್ ಅಧ್ಯಕ್ಷರಾಗಿದ್ದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಚಂದ್ರ ಪ್ರತಾಪ್ ವಿಶ್ವಕರ್ಮ ಅವರನ್ನು ಸೋಲಿಸಿದರು.

ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಣಿ ಅಗರವಾಲ್ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದರು ಮತ್ತು ದೇಶದಾದ್ಯಂತ ಜನರು ತಮ್ಮ ಪಕ್ಷದ ಪ್ರಾಮಾಣಿಕ ರಾಜಕೀಯ ವನ್ನು ಮೆಚ್ಚುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಶನ್ ಆದಾಯದ ದೃಷ್ಟಿಯಿಂದ ಇಂದೋರ್ ನಂತರ ರಾಜ್ಯದ ಎರಡನೇ ಶ್ರೀಮಂತ ಮುನ್ಸಿಪಲ್ ಕಾರ್ಪೊರೇಶನ್ ಆಗಿದೆ. ಸಿಂಗ್ರೌಲಿ ಜಿಲ್ಲೆಯನ್ನು ರಾಜ್ಯದ ವಿದ್ಯುತ್ ಉತ್ಪಾದಕ ಮತ್ತು ಕಲ್ಲಿದ್ದಲು ಮತ್ತು ಖನಿಜ ಗಣಿಗಾರಿಕೆ ಕೇಂದ್ರವೆಂದು ಪರಿಗಣಿಸಲಾಗಿದೆ.

ಇತ್ತೀಚೆಗೆ ಮೇಯರ್ ಚುನಾವಣೆ ನಡೆದ ಮಧ್ಯಪ್ರದೇಶದ 11 ನಾಗರಿಕ ಸಂಸ್ಥೆಗಳ ಪೈಕಿ, ಬುರ್ಹಾನ್‌ಪುರ, ಸತ್ನಾ, ಖಾಂಡ್ವಾ ಮತ್ತು ಸಾಗರ್‌ನಲ್ಲಿ ಬಿಜೆಪಿ ಇದುವರೆಗೆ ವಿಜಯಶಾಲಿಯಾಗಿದೆ, ಆದರೆ ಸಿಂಗ್ರೌಲಿಯಲ್ಲಿ ಗೆಲ್ಲುವ ಮೂಲಕ ಎಎಪಿ ತನ್ನ ಖಾತೆಯನ್ನು ತೆರೆದಿದೆ. ಕಾಂಗ್ರೆಸ್ ಇದುವರೆಗೆ ಒಂದು ಸ್ಥಾನ ಗೆದ್ದಿದೆ.

ಬಿಜೆಪಿ ಅಭ್ಯರ್ಥಿಗಳಾದ ಮಾಧುರಿ ಪಟೇಲ್, ಯೋಗೇಶ್ ತಾಮಾರ್ಕರ್, ಅಮೃತಾ ಅಮರ್ ಯಾದವ್ ಮತ್ತು ಸಂಗೀತಾ ತಿವಾರಿ ಅವರು ಕ್ರಮವಾಗಿ ಬುರ್ಹಾನ್‌ಪುರ, ಸತ್ನಾ, ಖಾಂಡ್ವಾ ಮತ್ತು ಸಾಗರ್‌ಗೆ ನಡೆದ ಮೇಯರ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಆದರೆ ಎಎಪಿ ಅಭ್ಯರ್ಥಿ ರಾಣಿ ಅಗರವಾಲ್ ನಗರ ಸಿಂಗ್ರೌಲಿ ನಗರದ ಉನ್ನತ ಸ್ಥಾನವನ್ನು ಗೆದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಗರದಲ್ಲಿ ಬಿಜೆಪಿಯ ಸಂಗೀತಾ ತಿವಾರಿ 12,665 ಮತಗಳಿಂದ ಜಯಗಳಿಸಿದ್ದು, ಸ್ಥಳೀಯ ಬಿಜೆಪಿ ಶಾಸಕ ಶೈಲೇಂದ್ರ ಜೈನ್ ಅವರ ಸೊಸೆ ನಿಧಿ ಜೈನ್ ಅವರನ್ನು ಸೋಲಿಸಿದ್ದಾರೆ. ಭೋಪಾಲ್, ಇಂದೋರ್ ಮತ್ತು ಉಜ್ಜಯಿನಿಯಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರ ಭದ್ರಕೋಟೆಯಾಗಿರುವ ಚಿಂದ್ವಾರದಿಂದ ನಡೆದ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮ್ ಅಹ್ಕೆ 3,500 ಮತಗಳಿಂದ ಗೆದ್ದಿದ್ದಾರೆ. ಜಬಲ್‌ಪುರ ಮತ್ತು ಗ್ವಾಲಿಯರ್‌ನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಮೊದಲ ಹಂತದ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯ ಎಣಿಕೆ ಇಂದು ಬೆಳಗ್ಗೆ ಆರಂಭವಾಗಿದೆ. ಮೊದಲ ಹಂತದಲ್ಲಿ ಜುಲೈ 6 ರಂದು 11 ಮುನ್ಸಿಪಲ್ ಕಾರ್ಪೊರೇಷನ್, 36 ನಗರ ಪಾಲಿಕೆ ಮತ್ತು 86 ನಗರ ಪರಿಷತ್‌ಗಳಲ್ಲಿ ಮತದಾನ ನಡೆದಿತ್ತು. ಪ್ರತಿಪಕ್ಷ ಕಾಂಗ್ರೆಸ್ 11 ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲು ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ರಾಜ್ಯ ಘಟಕದ ಮುಖ್ಯಸ್ಥ ಕಮಲ್ ನಾಥ್ ಅವರು ಅಕ್ರಮಗಳು ವರದಿಯಾದ ಯಾವುದೇ ನಗರಕ್ಕೆ ಧಾವಿಸಲು ಹೆಲಿಕಾಪ್ಟರ್ ಅನ್ನು ಸಹ ವ್ಯವಸ್ಥೆ ಮಾಡಿದೆ.

16 ನಗರ ಪಾಲಿಕೆ ನಿಗಮ, 99 ನಗರ ಪಾಲಿಕೆ ಪರಿಷತ್ ಮತ್ತು 298 ನಗರ ಪರಿಷತ್ ಸೇರಿದಂತೆ ರಾಜ್ಯದ 413 ಪುರಸಭೆಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಜುಲೈ 6 ಮತ್ತು ಜುಲೈ 13 ರಂದು ಎರಡು ಹಂತಗಳಲ್ಲಿ ನಡೆದಿದೆ.  ಎರಡನೇ ಹಂತದ ಚುನಾವಣೆಯ ಮತ ಎಣಿಕೆ ಜುಲೈ 20 ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com