ಮುಂಗಾರು ಅಧಿವೇಶನಕ್ಕೆ ಮುನ್ನ ಸರ್ವಪಕ್ಷ ಸಭೆ: ಪ್ರಧಾನಿ ಮೋದಿ ಗೈರಾಗಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಏನೆಂದರು?
ನಾಳೆ ಸಂಸತ್ತಿನ ಮುಂಗಾರು ಅಧಿವೇಶನ(Mansoon session) ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂದು ದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿತ್ತು. ಮುಂಗಾರು ಅಧಿವೇಶನದಲ್ಲಿ ಹೆಚ್ಚಿನ ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ, ಕಲಾಪಕ್ಕೆ ಸಹಕರಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.
Published: 17th July 2022 04:58 PM | Last Updated: 17th July 2022 04:58 PM | A+A A-

ಮಾಧ್ಯಮಗಳಿಗೆ ವಿವರ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ನವದೆಹಲಿ: ನಾಳೆ ಸಂಸತ್ತಿನ ಮುಂಗಾರು ಅಧಿವೇಶನ(Mansoon session) ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂದು ದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿತ್ತು. ಮುಂಗಾರು ಅಧಿವೇಶನದಲ್ಲಿ ಹೆಚ್ಚಿನ ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ, ಕಲಾಪಕ್ಕೆ ಸಹಕರಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಪೀಯೂಷ್ ಗೋಯಲ್, ಎಐಎಡಿಎಂಕೆ ಸಂಸದ ಎಂ ತಂಬಿದುರೈ, ವೈಎಸ್ಆರ್ ಸಿಪಿ ಸಂಸದ ವಿಜಯಸಾಯಿ ರೆಡ್ಡಿ, ಟಿಎಂಸಿ ಸಂಸದ ಸುದೀಪ್ ಬಂದೋಪಾಧ್ಯಾಯ್, ಅಪ್ನಾ ದಳ್ ಸಂಸದೆ ಅನುಪ್ರಿಯಾ ಪಟೇಲ್, ಕಾಂಗ್ರೆಸ್ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ರಾಷ್ಟ್ರೀಯ ಲೋಕ ದಳ್ ಸಂಸದರಾದ ಜಯಂತ್ ಚೌಧರಿ ಮತ್ತು ಡಿಎಂಕೆ ಸಂಸದ ತಿರುಚಿ ಸಿವ ಸೇರಿದಂತೆ 36 ಮಂದಿ ಸಂಸದರು ಹಾಜರಾಗಿದ್ದರು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗೈರಾಗಿದ್ದು, ಇದನ್ನು ವಿಪಕ್ಷ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.
ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ನಾವು 45 ಮಂದಿ ರಾಜಕೀಯ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದೆವು. ಅವರಲ್ಲಿ 36 ಮಂದಿ ಭಾಗಿಯಾಗಿದ್ದರು. ಅಧಿವೇಶನ ಸುಗಮವಾಗಿ ನಡೆಯಲು ಸಹಕರಿಸುವುದಾಗಿ ಸಂಸದರು ಭರವಸೆ ನೀಡಿದ್ದಾರೆ ಎಂದರು.
ಇನ್ನು ಪ್ರಧಾನಿ ಗೈರಾಗಿದ್ದ ಬಗ್ಗೆ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಅವರು, 2014ರ ಮೊದಲು ಸರ್ವಪಕ್ಷ ಸಭೆಯಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸುತ್ತಿರಲಿಲ್ಲ. ಮನಮೋಹನ್ ಸಿಂಗ್ ಅವರು ಎಷ್ಟು ಬಾರಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುತ್ತಿದ್ದರು ಎಂದು ತಿರುಗೇಟು ನೀಡಿದರು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿವಿಧ ಇಲಾಖೆಗಳಿಂದ 32 ಮಸೂದೆಗಳನ್ನು ಮಂಡಿಸಲು ಸೂಚಿಸಲಾಗಿದೆ. 14 ಮಸೂದೆಗಳು ಸಿದ್ಧವಾಗಿವೆ. ಚರ್ಚೆಯಿಲ್ಲದೆ ನಾವು ಮಸೂದೆಗಳನ್ನು ಅಂಗೀಕರಿಸುವುದಿಲ್ಲ ಎಂದರು.
सदन चलाने के लिए विपक्ष का सहयोग मांगने के लिए हम लगातार उनके साथ बैठक कर रहे हैं और उनसे सदन में चर्चा में भाग लेने की अपील कर रहे हैं।
— Pralhad Joshi (@JoshiPralhad) July 17, 2022
मैं स्पष्ट करना चाहता हूं कि सरकार सदन में नियम के अनुसार हर विषय पर चर्चा के लिए पूरी तरह से तैयार है। pic.twitter.com/bZwcmNbke7
ನಾಳೆಯಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನ ಮುಂದಿನ ತಿಂಗಳ 12ರವರೆಗೆ 18 ದಿನ ನಡೆಯಲಿದೆ. ಈ ಅವಧಿಯಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ನಡೆಯುವುದರಿಂದ ಈ ಅಧಿವೇಶನ ಮಹತ್ವ ಪಡೆದಿದೆ. ನಾಳೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಮುಂದಿನ ತಿಂಗಳ 6ರಂದು ಉಪರಾಷ್ಟ್ರಪತಿ ಚುನಾವಣೆ ನಿಗದಿಯಾಗಿದೆ. ಬೆಲೆ ಏರಿಕೆ, ಅಗ್ನಿಪಥ್ ಯೋಜನೆ, ನಿರುದ್ಯೋಗ ಸೇರಿದಂತೆ ಅನೇಕ ವಿಷಯಗಳನ್ನು ಪ್ರತಿಪಕ್ಷಗಳು ಅಧಿವೇಶನದ ವೇಳೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಕುಟುಂಬ ನ್ಯಾಯಾಲಯಗಳ ತಿದ್ದುಪಡಿ ಮಸೂದೆ, ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ, ಮಾಧ್ಯಮ ಮತ್ತು ನಿಯತಕಾಲಿಕೆಗಳ ನೋಂದಣಿ ಮಸೂದೆ ಸೇರಿದಂತೆ ವಿವಿಧ ಮಸೂದೆಗಳನ್ನು ಅಧಿವೇಶನದಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.
ನಾಳೆ ಮತ್ತೊಂದು ಸರ್ವಪಕ್ಷ ಸಭೆ: ಶ್ರೀಲಂಕಾ ಬಿಕ್ಕಟ್ಟು ಬಗ್ಗೆ ನಾಳೆ ಮತ್ತೊಂದು ಬಾರಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ಸಭೆಯನ್ನು ನಡೆಸಿಕೊಡಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿಯವರು ಶ್ರೀಲಂಕಾದಲ್ಲಿನ ಪರಿಸ್ಥಿತಿ ಮತ್ತು ಭಾರತವು ಈ ಹಿಂದೆ ದ್ವೀಪ ರಾಷ್ಟ್ರಕ್ಕೆ ನೀಡಿದ ನೆರವಿನ ಬಗ್ಗೆ ಸದಸ್ಯರ ಮುಂದೆ ಪ್ರಸ್ತುತಿಪಡಿಸುವ ಸಾಧ್ಯತೆಯಿದೆ. ಸಭೆ ನಾಳೆ ಸಂಜೆ ನಡೆಯಲಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಶ್ರೀಲಂಕಾ ಬಿಕ್ಕಟ್ಟು ಮತ್ತು ರಾಜ್ಯದಲ್ಲಿನ ನಿರಾಶ್ರಿತರನ್ನು ಕರೆಸಿಕೊಳ್ಳುವ ಬಗ್ಗೆ ಚಿಂತಿತವಾಗಿರುವ ತಮಿಳುನಾಡಿನಲ್ಲಿ ಹಲವಾರು ರಾಜಕೀಯ ಪಕ್ಷಗಳ ಆತಂಕವನ್ನು ಪರಿಹರಿಸಲು ಸರ್ಕಾರವು ಸ್ವಯಂಪ್ರೇರಣೆಯಿಂದ ಸರ್ವಪಕ್ಷ ಸಭೆ ಕರೆದಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.