ನ್ಯಾ. ಸಂದೇಶ್ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ; ಹೈಕೋರ್ಟ್ ಅವಲೋಕನಕ್ಕೆ ತಡೆ, ಅಧಿಕಾರಿಗಳಿಗೆ 'ಸುಪ್ರೀಂ' ರಿಲೀಫ್

ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನ ಅವಲೋಕನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಸಂಸ್ಥೆಯ ಅಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನ ಅವಲೋಕನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಉನ್ನತಾಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದೆ.

ಕರ್ನಾಟಕದ ಹಿರಿಯ ಪೊಲೀಸ್‌ ಅಧಿಕಾರಿ ಸೀಮಂತ್‌ ಕುಮಾರ್‌ ಸಿಂಗ್‌ ಮತ್ತು ಐಎಎಸ್ ಅಧಿಕಾರಿ ಜೆ ಮಂಜುನಾಥ್‌ ಅವರಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ರಿಲೀಫ್ ಕೊಟ್ಟಿದ್ದು, ಅವರನ್ನ “ಕಳಂಕಿತ ಅಧಿಕಾರಿ” ಮತ್ತು ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) “ವಸೂಲಿ ಕೇಂದ್ರ” ಎಂದು ಕರೆದಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರ ಅವಲೋಕನಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು, ಜಾಮೀನು ವಿಷಯವನ್ನು ಹೊಸದಾಗಿ ನಿರ್ಧರಿಸಲು ಹೈಕೋರ್ಟ್‌ಗೆ ನಿರ್ದೇಶನ ನೀಡುವಾಗ, ಆ ಅವಲೋಕನಗಳು ಪ್ರಕರಣಕ್ಕೆ ಸಂಬಂಧಿಸಿಲ್ಲ ಮತ್ತು ಪ್ರಕ್ರಿಯೆಯ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಯ ನಡವಳಿಕೆಯು ವಿಚಾರಣೆಯಲ್ಲಿರುವ ಪ್ರಕರಣಕ್ಕೆ ಸಂಬಂಧವಿಲ್ಲ. ಜಾಮೀನು ಅರ್ಜಿಯನ್ನು ಪರಿಗಣಿಸುವ ಬದಲು, ನ್ಯಾಯಾಧೀಶರು ಸಂಬಂಧವಿಲ್ಲದ ಮತ್ತು ವ್ಯಾಪ್ತಿ ಮೀರಿದ ಇತರ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಮತ್ತು ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಜೆ ಮಂಜುನಾಥ್ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರ ಲಂಚ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ಪ್ರತಿಕೂಲ ಹೇಳಿಕೆಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಕಲಾಪಕ್ಕೆ ತಡೆ ನೀಡುವಂತೆ ಕೋರಿದ್ದರು.

ಈ ಹಿಂದೆ ವಿಚಾರಣೆಯಲ್ಲಿ ನ್ಯಾಯಮೂರ್ತಿ ಸಂದೇಶ್ ಅವರು, 'ಆಗ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಲಂಚ ಪ್ರಕರಣದಲ್ಲಿ ಏಕೆ ಆರೋಪಿಯನ್ನಾಗಿ ಮಾಡಲಿಲ್ಲ ಎಂದು ಪ್ರಶ್ನಿಸಿದ್ದರು. 

ಪ್ರಸ್ತುತ ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರು ತಮ್ಮ ವಿರುದ್ಧ ವಾದ ಮಂಡಿಸಲು ಅವಕಾಶ ನೀಡದೆ ಕೆಲವು ಅವಲೋಕನಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ತನಿಖೆಯ ಆರಂಭಿಕ ಹಂತಗಳಲ್ಲಿ ಇಂತಹ ಹೇಳಿಕೆಗಳು ಜಾಮೀನು ಪರಿಹಾರದ ಹಕ್ಕು ಸೇರಿದಂತೆ ಕ್ರಿಮಿನಲ್ ಪ್ರಕ್ರಿಯೆಗಳ ನ್ಯಾಯಯುತ ತನಿಖೆ ಮತ್ತು ನ್ಯಾಯಸಮ್ಮತವಾದ ತೀರ್ಮಾನದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತವೆ ಎಂಬ ಅಂಶವನ್ನು ಹೈಕೋರ್ಟ್ ಕಳೆದುಕೊಂಡಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ನ್ಯಾಯಾಧೀಶರು ಮಾಡಿದ ಆರೋಪಗಳು ಬೇರೆ ವಿಷಯವಾಗಿದ್ದು, ನಾವು ಒಂದು ಕಡೆ ಒಲವು ತೋರುತ್ತಿದ್ದೇವೆ ಎಂಬ ಭಾವನೆಯನ್ನು ನಾವು ನೀಡಲು ಬಯಸುವುದಿಲ್ಲ ಎಂದು ಸಿಜೆಐ ಎನ್ ವಿ ರಮಣ ಹೇಳಿದರು. ಅಂತೆಯೇ ಮೂರು ವಾರಗಳ ನಂತರ ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ ಎಂದು ವಿಚಾರಣೆ ಮುಂದೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com