ರಾಷ್ಟ್ರಪತಿ ಚುನಾವಣೆ: 2ನೇ ಸುತ್ತಿನ ಮತ ಎಣಿಕೆಯಲ್ಲೂ ದ್ರೌಪದಿ ಮುರ್ಮು ಮುನ್ನಡೆ, ಗೆಲುವಿನತ್ತ ದಾಪುಗಾಲು

ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರಪತಿ ಚುನಾವಣೆಯ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, 2ನೇ ಸುತ್ತಿನ ಮತ ಎಣಿಕೆಯಲ್ಲೂ ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾರಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿರಿಸಿದ್ದಾರೆ ಎನ್ನಲಾಗಿದೆ.
ದ್ರೌಪದಿ ಮುರ್ಮು(ಸಂಗ್ರಹ ಚಿತ್ರ)
ದ್ರೌಪದಿ ಮುರ್ಮು(ಸಂಗ್ರಹ ಚಿತ್ರ)

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರಪತಿ ಚುನಾವಣೆಯ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, 2ನೇ ಸುತ್ತಿನ ಮತ ಎಣಿಕೆಯಲ್ಲೂ ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾರಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿರಿಸಿದ್ದಾರೆ ಎನ್ನಲಾಗಿದೆ.

ದ್ರೌಪದಿ ಮುರ್ಮು ಅವರು ಹಿಂದಿನ ಅಂದರೆ ಮೊದಲ ಸುತ್ತಿನ ಮತಎಣಿಕೆ ಫಲಿತಾಂಶ ಸೇರಿದಂತೆ 4,83,299 ಮೌಲ್ಯದ 1,349 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಕುರಿತಂತೆ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಅವರು ಮಾಹಿತಿ ನೀಡಿದ್ದು, ಇದುವರೆಗಿನ ಒಟ್ಟು 1,886 ಮಾನ್ಯ ಮತಗಳು 6,73,175 ಮೌಲ್ಯದ್ದಾಗಿದೆ. ಗುರುವಾರ ನಡೆದ ಮತದಾನದಲ್ಲಿ ಯಶವಂತ್ ಸಿನ್ಹಾ ಅವರು 537 ಮತಗಳನ್ನು ಪಡೆದಿದ್ದು, ಇಲ್ಲಿಯವರೆಗೆ 1,89,876 ಮೌಲ್ಯದ ಮತಗಳನ್ನು ಪಡೆದಿದ್ದಾರೆ.

ಎರಡನೇ ಸುತ್ತಿನ ನಂತರ, ಮೊದಲ 10 ರಾಜ್ಯಗಳ ಬ್ಯಾಲೆಟ್ ಪೇಪರ್ ಅನ್ನು ವರ್ಣಮಾಲೆ ಸರದಿಯಂತೆ ಎಣಿಸಿದಾಗ, ಒಟ್ಟು ಮಾನ್ಯವಾದ ಮತಗಳು 1138 ಮತ್ತು ಅವುಗಳ ಒಟ್ಟು ಮೌಲ್ಯ 1,49,575. ಈ ಪೈಕಿ ದ್ರೌಪದಿ ಮುರ್ಮು 809 ಮತಗಳನ್ನು ಅಂದರೆ 1,05,299 ಮೌಲ್ಯದ ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು 44,276 ಮೌಲ್ಯದ 329 ಮತಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ಹಾಲಿ ಚಲಾವಣೆಯಾಗಿರುವ ಮತಗಳ ಪೈಕಿ 15 ಸಂಸದರ ಮತಗಳು ಅಸಿಂಧು ಎಂದು ಘೋಷಿಸಲಾಗಿದೆ ಎಂದು ಪಿಸಿ ಮೋದಿ ತಿಳಿಸಿದ್ದಾರೆ. ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದ್ದು, ಮುರ್ಮು ಅವರು ಒಟ್ಟು 5,23,600 ಮತಗಳನ್ನು ಪಡೆದಿದ್ದು, ಇದು ಒಟ್ಟು ಮಾನ್ಯ ಸಂಸದರ ಮತಗಳ ಶೇಕಡಾ 72.19 ರಷ್ಟಿದೆ ಎನ್ನಲಾಗಿದೆ. ಅಂತೆಯೇ ಈ ಅಂಕಿಅಂಶಗಳು ಅವರ ಪರವಾಗಿ ಕೆಲವು ಅಡ್ಡ ಮತದಾನವಾಗಿದೆ ಎಂಬುದನ್ನು ಸಷ್ಟಪಡಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ, ಯಶವಂತ್ ಸಿನ್ಹಾ ಅವರ ಒಟ್ಟು ಮತ ಮೌಲ್ಯವು 1,45,600 ರಷ್ಟಿದೆ, ಇದು ಒಟ್ಟು ಮಾನ್ಯ ಮತಗಳ ಶೇಕಡಾ 27.81 ಆಗಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com