37 ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ವಾರದರಜೆ: ವರದಿ ಕೇಳಿದ ಎನ್ ಸಿಪಿಸಿಆರ್

ಬಿಹಾರದಲ್ಲಿ  37 ಸರ್ಕಾರಿ ಶಾಲೆಗಳು ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ಘೋಷಣೆ ಮಾಡಿ ಇದೀಗ ವಿವಾದಕ್ಕೆ ಗ್ರಾಸವಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ಸರ್ಕಾರದಿಂದ ವರದಿ ಕೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾಟ್ನಾ: ಬಿಹಾರದಲ್ಲಿ  37 ಸರ್ಕಾರಿ ಶಾಲೆಗಳು ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ಘೋಷಣೆ ಮಾಡಿ ಇದೀಗ ವಿವಾದಕ್ಕೆ ಗ್ರಾಸವಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ಸರ್ಕಾರದಿಂದ ವರದಿ ಕೇಳಿದೆ.

ಹೌದು... ಬಿಹಾರದ ಮುಸ್ಲಿಂ ಬಾಹುಳ್ಯ ಜಿಲ್ಲೆಯ ಕಿಶನ್‌ಗಂಜ್‌ನಲ್ಲಿ 37 ಸರ್ಕಾರಿ ಶಾಲೆಗಳಿದ್ದು, ಇಲ್ಲಿ ವಾರದ ರಜೆಯನ್ನು ಭಾನುವಾರದ ಬದಲು  ಶುಕ್ರವಾರ ನೀಡಲಾಗುತ್ತಿದೆ. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ಭಾನುವಾರ ವಾರದ ರಜೆಯನ್ನು ನೀಡಲಾಗುತ್ತದೆ. ಆದರೆ ಇಲ್ಲಿ ಮಾತ್ರ ಶಾಲೆಗಳಿಗೆ ಶುಕ್ರವಾರ ರಜೆ ನೀಡಿ ಭಾರಿ ಸುದ್ದಿಗೆ ಗ್ರಾಸವಾಗಿವೆ. ಶುಕ್ರವಾರ ವಾರದ ರಜೆ ನೀಡಲು ಯಾರು ಅನುಮತಿ ನೀಡಿದ್ದಾರೆ ಎನ್ನುವುದಕ್ಕೆ ಉತ್ತರ ಶಿಕ್ಷಣ ಇಲಾಖೆಯಾ ಬಳಿಯೂ ಇಲ್ಲ. ಈ ಪ್ರದೇಶದಲ್ಲಿ ಶೇ.60ರಷ್ಟು ಮುಸ್ಲಿಂ ವಿದ್ಯಾರ್ಥಿಗಳಿರುವ ಕಾರಣ ಶಾಲೆಗಳಿಗೆ ಶುಕ್ರವಾರ ರಜೆ ನೀಡುವ ಪದ್ಧತಿ ಜಾರಿಗೆ ಬಂದಿದೆ ಎನ್ನಲಾಗಿದೆ. 

ಶುಕ್ರವಾರ ರಜೆ ಇರುವ ಹಿನ್ನೆಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವುದು ಸುಲಭವಾಗಲಿದೆ. ಇಲ್ಲಿನ ಶಾಲೆಗಳಲ್ಲಿ ಶುಕ್ರವಾರ ವಾರದ ರಜೆ ನೀಡುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದೀಗ ಈ ಸಂಪ್ರದಾಯವು ವ್ಯವಸ್ಥೆಯ ವಿರುದ್ದ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಿಲ್ಲೆಯ ಐದು ಬ್ಲಾಕ್‌ಗಳ ಒಟ್ಟು 37 ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿದೆ. ಜಿಲ್ಲೆಯ ಪೋಥಿಯಾ ಬ್ಲಾಕ್‌ನಲ್ಲಿ, ಗರಿಷ್ಠ 16 ಶಾಲೆಗಳಿಗೆ  ಶುಕ್ರವಾರ ರಜೆ ನೀಡಿ, ಭಾನುವಾರ ಶಾಲೆಗಳನ್ನು ನಡೆಸಲಾಗುತ್ತದೆ. 

ಅತ್ಯಂತ ಮುಖ್ಯವಾದ ವಿಷಯವೆಂದರೆ ಪೋಥಿಯಾ ಬ್ಲಾಕ್ ಏಷ್ಯಾದಲ್ಲಿ ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿರುವ ಬ್ಲಾಕ್ ಆಗಿದೆ. ಮತ್ತೊಂದೆಡೆ, ಮೊದಲಿನಿಂದಲೂ ಈ ಜಿಲ್ಲೆಯ ಶಾಲೆಗೆ ಶುಕ್ರವಾರದ ದಿನವೇ ರಜೆ ನೀಡಲಾಗುತ್ತಿದೆ ಎಂದು ಕರ್ಬಲಾ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಮೊಹಮ್ಮದ್ ವಾಸಿಂ ತಿಳಿಸಿದ್ದಾರೆ. ಆದರೆ ಈ ಬಗ್ಗೆ  ಸರ್ಕಾರದ ಆದೇಶವಿದೆಯೇ ಇಲ್ಲವೇ ಎಂಬುದರ ಅಬ್ಗ್ಗೆ ಅವರಿಗೂ ಮಾಹಿತಿ ಇಲ್ಲ ಎನ್ನಲಾಗಿದೆ. 

ಇದೀಗ ಭಾನುವಾರದ ಬದಲು ಶುಕ್ರವಾರ ರಜೆ ನೀಡುತ್ತಿರುವ ಕ್ರಮಕ್ಕೆ ಹಿಂದೂ ಸಮಾಜದ ಶಿಕ್ಷಕರು ಹಾಗೂ ಶಿಕ್ಷಕ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶುಕ್ರವಾರ ಶಾಲೆಗಳು ಮುಚ್ಚಿರುವುದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎನ್ನುವುದು ಅವರ ಮಾತು. ಭಾನುವಾರ ಶಾಲೆಗೆ ಹೋಗುವ ಶಿಕ್ಷಕರು ತಮ್ಮ ಕುಟುಂಬ ಮತ್ತು ಮಕ್ಕಳ ಜೊತೆ  ಸಮಯ ಕಳೆಯುವುದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ವರದಿ ಕೇಳಿದ ಎನ್ ಸಿಪಿಸಿಆರ್
ರಾಜ್ಯದ ಮುಸ್ಲಿಂ ಪ್ರಾಬಲ್ಯವಿರುವ ಜಿಲ್ಲೆಯ 37 ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆಯನ್ನು ಆಚರಿಸುವ ಕುರಿತು ಉನ್ನತ ಮಕ್ಕಳ ಹಕ್ಕುಗಳ ಸಂಸ್ಥೆ NCPCR ಬುಧವಾರ ಬಿಹಾರ ಸರ್ಕಾರದಿಂದ ವಿವರಣೆ ಕೇಳಿದೆ. ಬಿಹಾರದ ಮುಖ್ಯ ಕಾರ್ಯದರ್ಶಿ ಅಮೀರ್ ಸುಭಾನಿಗೆ ಬರೆದ ಪತ್ರದಲ್ಲಿ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಯಾರ ನಿರ್ದೇಶನದ ಮೇರೆಗೆ ಭಾನುವಾರದ ಬದಲು ಶುಕ್ರವಾರವನ್ನು ವಾರದ ರಜೆ ಎಂದು ಘೋಷಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಬಗ್ಗೆ 10 ದಿನಗಳಲ್ಲಿ ಬಿಹಾರ ಸರ್ಕಾರದಿಂದ ವರದಿ ಕೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com