'ರಾಣಿ ಅಥವಾ ಯುವರಾಜ' ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಕಾಂಗ್ರೆಸ್ ಪ್ರತಿಭಟನೆಗೆ ಕೇಂದ್ರ ತಿರುಗೇಟು

ಸಂಸತ್ತಿನಲ್ಲಿ ಪ್ರತಿಭಟನೆಯ ನಂತರ 24 ಸಂಸದರನ್ನು ಅಮಾನತುಗೊಳಿಸಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಲ್ಲಂಘಿಸಿದಂತೆ ಎಂದು ಪ್ರತಿಪಕ್ಷಗಳು ತೀವ್ರತರವಾದ ದನಿ ಎತ್ತಿವೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಸಂಸತ್ತಿನಲ್ಲಿ ಪ್ರತಿಭಟನೆಯ ನಂತರ 24 ಸಂಸದರನ್ನು ಅಮಾನತುಗೊಳಿಸಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಲ್ಲಂಘಿಸಿದಂತೆ ಎಂದು ಪ್ರತಿಪಕ್ಷಗಳು ತೀವ್ರತರವಾದ ದನಿ ಎತ್ತಿವೆ.  

ತನ್ನ ಸಂಸದರನ್ನು ಅಮಾನತುಗೊಳಿಸುವುದರ ಜೊತೆಗೆ, ತನ್ನ ಉನ್ನತ ನಾಯಕರಿಗೆ ಕಿರುಕುಳ ನೀಡುತ್ತಿರುವ ತನಿಖಾ ಸಂಸ್ಥೆಗಳ ವಿರುದ್ಧ ಪ್ರತಿಭಟಿಸಲು ಅವಕಾಶ ನೀಡುತ್ತಿಲ್ಲ, ಪ್ರತಿಭಟಿಸುವವರನ್ನ ಬಂಧಿಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವ ಮತ್ತು ಗದ್ದಲ ಸೃಷ್ಟಿಸುವ ಮೂಲಕ ತನ್ನ ನಾಯಕರನ್ನು ರಕ್ಷಿಸಲು ಹಳೆಯ ಪಕ್ಷವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕೇಂದ್ರವು ತಿರುಗೇಟು ನೀಡಿದೆ.

'ಸರ್ಕಾರವು ಸಂಸತ್ತಿನಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಹೊರಗೆ ಸೋನಿಯಾ ಗಾಂಧಿಯವರಿಗೆ ರಾಜಕೀಯ ಸೇಡಿಗಾಗಿ ತನಿಖಾ ಸಂಸ್ಥೆಗಳಿಂದ ಕಿರುಕುಳ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿಯೂ ಪ್ರತಿಭಟನೆಗಳು ನಡೆದಿವೆ ಆದರೆ ನಾವು ಯಾರನ್ನೂ ಅಮಾನತುಗೊಳಿಸಿಲ್ಲ' ಎಂದು ಕಾಂಗ್ರೆಸ್ ಹೇಳಿದೆ.

ಮೇಲ್ಮನೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಮಾನತುಗಳನ್ನು ಕಾನೂನುಬಾಹಿರ ಎಂದು ಕರೆದರು ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವ ಮೂಲಕ ಈ ಪ್ರಜಾಪ್ರಭುತ್ವ ವಿರೋಧಿ ಏಕಮುಖ ಪ್ರಕ್ರಿಯೆಗಳನ್ನು ನಡೆಸಲು ಮೋದಿ ಸರ್ಕಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.

ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಯಾರೂ ಪ್ರಜಾಪ್ರಭುತ್ವ ಮತ್ತು ಕಾನೂನಿಗಿಂತ ಮೇಲಲ್ಲ. ರಾಣಿಯಾಗಲಿ, ಯುವರಾಜನೇ ಆಗಲಿ.ಕಾಂಗ್ರೆಸ್ ಪಕ್ಷವು ನ್ಯಾಯಾಂಗ ಮತ್ತು ಕಾನೂನಿಗಿಂತ ತನ್ನನ್ನು ತಾನು ಮೇಲ್ಮಟ್ಟದಲ್ಲಿ ಪರಿಗಣಿಸುತ್ತದೆ. ಅವರು ತನಿಖೆಯಿಂದ ತಪ್ಪಿಸಿಕೊಳ್ಳಲು ಏಕೆ ಬಯಸುತ್ತಾರೆ? ತನಿಖೆ ಪೂರ್ಣಗೊಳ್ಳಲಿ.ಆಗ ಮಾತ್ರ ಸತ್ಯ ಹೊರಬರಲಿದೆ ಎಂದರು.

ಅಮಾನತು ಮತ್ತು ಇತರ ವಿಷಯಗಳ ಬಗ್ಗೆ ಪ್ರತಿಪಕ್ಷಗಳ ಗದ್ದಲದ ನಂತರ ರಾಜ್ಯಸಭೆಯ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು. ರಾಜ್ಯಸಭೆಯ 20 ಸಂಸದರು ಸೇರಿದಂತೆ 24 ಸಂಸದರನ್ನು ಇದುವರೆಗೆ ಅಮಾನತುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com