ದೆಹಲಿ ನೂತನ ಪೊಲೀಸ್ ಆಯುಕ್ತರಾಗಿ ಸಂಜಯ್ ಅರೋರಾ ನೇಮಕ

ತಮಿಳುನಾಡು ಕೇಡರ್‌ನ ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಅಧಿಕಾರಿ ಸಂಜಯ್ ಅರೋರಾ ಅವರು ದೆಹಲಿ ನೂತನ ಪೊಲೀಸ್ ಆಯುಕ್ತರಾಗಿ ನೇಮಕ ಗೊಂಡಿದ್ದಾರೆ. ರಾಕೇಶ್ ಅಸ್ಥಾನಾ ನಂತರ ದೆಹಲಿಯ ಪೊಲೀಸ್ ಕಮಿಷನರ್...
ಸಂಜಯ್ ಅರೋರಾ
ಸಂಜಯ್ ಅರೋರಾ

ನವದೆಹಲಿ: ತಮಿಳುನಾಡು ಕೇಡರ್‌ನ ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಅಧಿಕಾರಿ ಸಂಜಯ್ ಅರೋರಾ ಅವರು ದೆಹಲಿ ನೂತನ ಪೊಲೀಸ್ ಆಯುಕ್ತರಾಗಿ ನೇಮಕ ಗೊಂಡಿದ್ದಾರೆ. ರಾಕೇಶ್ ಅಸ್ಥಾನಾ ನಂತರ ದೆಹಲಿಯ ಪೊಲೀಸ್ ಕಮಿಷನರ್ ಆಗಲಿದ್ದಾರೆ. ಅವರು ತಮ್ಮ ಪ್ರಸ್ತುತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಡೈರೆಕ್ಟರ್ ಜನರಲ್ ಹುದ್ದೆಯನ್ನು ಆಗಸ್ಟ್ 1 ರಂದು ತೊರೆಯಲಿದ್ದಾರೆ. ಅವರು ಜುಲೈ 31, 2025 ರಂದು ನಿವೃತ್ತರಾಗುವವರೆಗೆ ಅಥವಾ ಕೇಂದ್ರ ಗೃಹ ಸಚಿವಾಲಯದ ಪ್ರಕಾರ ಮುಂದಿನ ಆದೇಶದವರೆಗೆ ದೆಹಲಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಲಿದ್ದಾರೆ.

ಸಶಸ್ತ್ರ ಸೀಮಾ ಬಲದ ಮಹಾನಿರ್ದೇಶಕರಾದ ಎಸ್‌ಎಲ್ ಥಾಸೆನ್ ಅವರು ಸದ್ಯಕ್ಕೆ ಹೆಚ್ಚುವರಿ ಐಟಿಬಿಪಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಸಂಜಯ್ ಅರೋರಾ ಅವರು AGMUT (ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ) ಕೇಡರ್‌ನ ಹೊರಗಿನಿಂದ ದೆಹಲಿ ಪೊಲೀಸ್ ಕಮಿಷನರ್ ಆಗಿ ನೇಮಕವಾದ ಮೂರನೇ ಅಧಿಕಾರಿಯಾಗಿದ್ದಾರೆ. 1984ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ರಾಕೇಶ್‌ ಅಸ್ಥಾನಾ ಅವರನ್ನು ಜುಲೈ 2021ರಲ್ಲಿ ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. 1966ರ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್‌ನ ಐಪಿಎಸ್‌ ಅಧಿಕಾರಿ ಅಜಯ್‌ ರಾಜ್‌ ಶರ್ಮಾ ಅವರು 1999ರಲ್ಲಿ ಈ ಹುದ್ದೆಯನ್ನು ಪಡೆದಿದ್ದರು. ಗೃಹ ಸಚಿವಾಲಯದ ಆದೇಶದ ಪ್ರಕಾರ 1988 ರ ಐಪಿಎಸ್ ಬ್ಯಾಚ್ ನ ಸಂಜಯ್ ಅರೋರಾ ಅವರನ್ನು ಈ ನೇಮಕಾತಿಗಾಗಿ AGMUT ಕೇಡರ್‌ಗೆ ಔಪಚಾರಿಕವಾಗಿ ನಿಯೋಜಿಸಲಾಗಿದೆ.

ಸಂಜಯ್ ಅರೋರಾ ಅವರು ಜೈಪುರದ ಮಾಲ್ವಿಯಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ.

IPSಗೆ ಸೇರಿದ ನಂತರ, ಅವರು ಆರಂಭದಲ್ಲಿ ತಮಿಳುನಾಡಿನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಡಕಾಯಿಟ್ ವೀರಪ್ಪನ್ ಮತ್ತು ಅವನ ಗ್ಯಾಂಗ್ ವಿರುದ್ಧ ಕಾರ್ಯಪಡೆಯ ಭಾಗವಾಗಿದ್ದರು. ಅದಕ್ಕಾಗಿ ಅವರಿಗೆ ಮುಖ್ಯಮಂತ್ರಿಗಳ ಶೌರ್ಯ ಪದಕವನ್ನು ನೀಡಲಾಯಿತು ಎಂದು ಗೃಹ ಸಚಿವಾಲಯದ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಆಗಸ್ಟ್ ನಲ್ಲಿ ಅವರು ಐಟಿಬಿಪಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಅವರ ಗೌರವಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಯುಎನ್ ಶಾಂತಿಪಾಲನಾ ಪದಕವನ್ನು ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com