ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ: ಅಜಿತ್ ದೋವಲ್ ಜೊತೆ ಅಮಿತ್ ಶಾ ಉನ್ನತ ಮಟ್ಟದ ಸಭೆ!
ಕಾಶ್ಮೀರದಲ್ಲಿ ಹಿಂದೂಗಳನ್ನ ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯೆಗಳ ಸರಣಿ ಮುಂದುವರೆದಿದ್ದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದರು.
Published: 02nd June 2022 04:32 PM | Last Updated: 02nd June 2022 06:33 PM | A+A A-

ಅಜಿತ್ ದೋವಲ್-ಅಮಿತ್ ಶಾ
ನವದೆಹಲಿ: ಕಾಶ್ಮೀರದಲ್ಲಿ ಹಿಂದೂಗಳನ್ನ ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯೆಗಳ ಸರಣಿ ಮುಂದುವರೆದಿದ್ದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿ ಕಾಶ್ಮೀರದಲ್ಲಿ ನಡೆಯುತ್ತಿರುವ ಉದ್ದೇಶಿತ ಹತ್ಯೆಗಳ ಕುರಿತು ಚರ್ಚಿಸಿದರು. ಪ್ರಧಾನಿ ಕಾರ್ಯಾಲಯದ ಕೇಂದ್ರದ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಕೂಡ ಸಭೆಯಲ್ಲಿ ಪಾಲ್ಗೊಂಡರು.
ಮೂರು ದಿನಗಳಲ್ಲಿ ಕಣಿವೆಯಲ್ಲಿ ಹಿಂದೂಗಳ ಮೇಲಿನ ಎರಡನೇ ಉದ್ದೇಶಿತ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ಭಯೋತ್ಪಾದಕರಿಂದ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ತುರ್ತು ಸಭೆ ನಡೆಸಲಾಗ್ತಿದೆ.
ಇಲಾಖಾಹಿ ದೇಹತಿ ಬ್ಯಾಂಕ್ನ ಅರೆಹ್ ಶಾಖೆಗೆ ಭಯೋತ್ಪಾದಕ ನುಗ್ಗಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಮೇಲೆ ಗುಂಡು ಹಾರಿಸಿದ್ದ. ಸಿಸಿಕ್ಯಾಮೆರಾ ದೃಶ್ಯಾವಳಿಯಲ್ಲಿ ಹಂತಕನು ಶಾಖೆಯೊಳಗೆ ಪ್ರವೇಶಿಸಿ ಗುಂಡು ಹಾರಿಸಿ ಪರಾರಿಯಾಗುವುದನ್ನು ತೋರಿಸುತ್ತದೆ. ವಿಜಯ್ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು. ಜಮ್ಮುವಿನ ಹಿಂದೂ ಶಿಕ್ಷಕಿ ರಜನಿ ಬಾಲಾ ಅವರನ್ನು ಕುಲ್ಗಾಮ್ನಲ್ಲಿ ಶಾಲೆಯ ಹೊರಗೆ ಭಯೋತ್ಪಾದಕರು ಕೊಂದ ಎರಡು ದಿನಗಳ ನಂತರ ಈ ದಾಳಿ ನಡೆದಿದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಕುಲ್ಗಾಮ್ ನಲ್ಲಿ ಉಗ್ರರಿಂದ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ!
ಪಕ್ಕದ ಶೋಪಿಯಾನ್ ಜಿಲ್ಲೆಯಲ್ಲಿ ಎರಡು ಪ್ರಮುಖ ಘಟನೆಗಳು ನಡೆದ 24 ಗಂಟೆಗಳಲ್ಲಿ ಕುಲ್ಗಾಮ್ನಲ್ಲಿ ಬ್ಯಾಂಕ್ ಮ್ಯಾನೇಜರ್ ಹತ್ಯೆಯಾಗಿದೆ. ಫಾರೂಕ್ ಅಹ್ಮದ್ ಶೇಖ್ ಎಂಬ ನಾಗರಿಕ ನಿನ್ನೆ ಸಂಜೆ ತನ್ನ ಮನೆಯೊಳಗೆ ಉದ್ದೇಶಿತ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಮತ್ತೊಂದು ಘಟನೆಯಲ್ಲಿ ಇಂದು ಮುಂಜಾನೆ ವಾಹನದಲ್ಲಿ ಸ್ಫೋಟ ಸಂಭವಿಸಿ ಮೂವರು ಯೋಧರು ಗಾಯಗೊಂಡಿದ್ದಾರೆ. ಯೋಧರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿವೆ.
ಸೇನೆಯ ಪ್ರಕಾರ, ಮೂವರು ಸೈನಿಕರು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಾಗಿ ಖಾಸಗಿ ವಾಹನವನ್ನು ತೆಗೆದುಕೊಂಡಿದ್ದರು. ಟಾರ್ಗೆಟ್ ಮಾಡಿದ್ದ ಪ್ರದೇಶಕ್ಕೆ ಯೋಧರು ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿದೆ.
ಇದನ್ನೂ ಓದಿ: ಜೂನ್ 6ರ ಹೊತ್ತಿಗೆ ಕಾಶ್ಮೀರ ಕಣಿವೆಯ ಸುರಕ್ಷಿತ ಸ್ಥಳಗಳಿಗೆ ಕಾಶ್ಮೀರ ಪಂಡಿತರ ಸ್ಥಳಾಂತರ
ತಮ್ಮನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಕಾಶ್ಮೀರಿ ಪಂಡಿತರು ಕೇಂದ್ರಾಡಳಿತ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ಹೊಸ ದಾಳಿ ನಡೆದಿದೆ. ಕಳೆದ ತಿಂಗಳು ಬುದ್ಗಾಮ್ನ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಕೊಂದ ನಂತರ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಧಾನಿಯವರ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಕಣಿವೆಯಲ್ಲಿ ಉದ್ಯೋಗದಲ್ಲಿರುವ ಸುಮಾರು 4,000 ಕಾಶ್ಮೀರ ಪಂಡಿತರು ಇನ್ನು ಮುಂದೆ ಸುರಕ್ಷಿತವಾಗಿಲ್ಲದ ಕಾರಣ ಸಾಮೂಹಿಕ ವಲಸೆಯ ಬೆದರಿಕೆ ಹಾಕಿದ್ದಾರೆ. ಅವರು ಹೊರಹೋಗುವುದನ್ನು ತಡೆಯಲು, ಕೇಂದ್ರಾಡಳಿತ ಪ್ರದೇಶದ ಆಡಳಿತವು ಬ್ಯಾರಿಕೇಡ್ಗಳನ್ನು ಹಾಕಿದೆ. ಸಾರಿಗೆ ಶಿಬಿರಗಳ ಗೇಟ್ಗಳನ್ನು ಲಾಕ್ ಮಾಡಿದೆ.