ಜಮ್ಮು ಮತ್ತು ಕಾಶ್ಮೀರ: ಕುಲ್ಗಾಮ್ ನಲ್ಲಿ ಉಗ್ರರಿಂದ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ!
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಉದ್ದೇಶಿತ ದಾಳಿ ಮಾಡಿರುವ ಉಗ್ರರು ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Published: 02nd June 2022 01:15 PM | Last Updated: 02nd June 2022 01:38 PM | A+A A-

ಸಾಂದರ್ಭಿಕ ಚಿತ್ರ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಉದ್ದೇಶಿತ ದಾಳಿ ಮಾಡಿರುವ ಉಗ್ರರು ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರಾಜಸ್ಥಾನದ ಹನುಮಾನ್ಗಡ ಮೂಲದ ಇಲಾಖಾಹಿ ದೇಹತಿ ಬ್ಯಾಂಕ್ನ ಬ್ಯಾಂಕ್ ಮ್ಯಾನೇಜರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಅರೇಹ್ ಮೋಹನ್ಪೊರಾದ ಇಲಾಖಿ ದೆಹಾತಿ ಬ್ಯಾಂಕ್ನ (Ellaqui Dehati Bank) ವ್ಯವಸ್ಥಾಪಕ ವಿಜಯ್ ಕುಮಾರ್ ಅವರನ್ನು ಬ್ಯಾಂಕ್ ಆವರಣದೊಳಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ತನಿಖೆ ಕೈಗೊಂಡಿದ್ದಾರೆ. ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ವಿಜಯ್ ಕುಮಾರ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರವಾಗಿ ಗಾಯಗೊಂಡಿದ್ದ ಅವರು ಸಾವಿಗೀಡಾದರು.
ಇದನ್ನೂ ಓದಿ: ಜೂನ್ 6ರ ಹೊತ್ತಿಗೆ ಕಾಶ್ಮೀರ ಕಣಿವೆಯ ಸುರಕ್ಷಿತ ಸ್ಥಳಗಳಿಗೆ ಕಾಶ್ಮೀರ ಪಂಡಿತರ ಸ್ಥಳಾಂತರ
ಸ್ಥಳಿಯೇತರರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮುಂದುವರಿಸಿದ್ದು, ವಾರದ ಅಂತರದಲ್ಲಿ ನಾಗರಿಕರ ಮೇಲೆ ನಡೆದಿರುವ ಎರಡನೇ ದಾಳಿ ಇದಾಗಿದೆ. ಇತ್ತೀಚೆಗೆ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆ ಮಾಡಿದ್ದರು.
'ಉಗ್ರರು ಈಗ ಸಾರ್ವಜನಿಕ ಸೇವೆಯಲ್ಲಿರುವವರನ್ನೂ ಗುರಿಯಾಗಿಸಿಕೊಂಡಿದ್ದಾರೆ. ಇದು ತೀವ್ರ ಕಳವಳ ಸಂಗತಿಯಾಗಿದೆ. ಈ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಸೂಕ್ತ ಯೋಜನೆ ರೂಪಿಸಲು ಸಕಾಲವಾಗಿದೆ' ಎಂದು ಜಮ್ಮು–ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರಕ್ಷಣೆ ಒದಗಿಸದಿದ್ದರೆ ಸಾಮೂಹಿಕ ವಲಸೆ: ಕಾಶ್ಮೀರಿ ಪಂಡಿತರ ಎಚ್ಚರಿಕೆ
ಉಗ್ರರ ದಾಳಿಯ ನಂತರ, ಭದ್ರತಾ ಅಧಿಕಾರಿಗಳು ಮತ್ತು ಪೊಲೀಸ್, ಸಿಆರ್ಪಿಎಫ್ ಮತ್ತು ಸೇನಾ ಸಿಬ್ಬಂದಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಘಟನಾ ಸ್ಥಳಕ್ಕೆ ಧಾವಿಸಿದರು. ಭದ್ರತಾ ಸಿಬ್ಬಂದಿಗಳು ಪ್ರದೇಶದ ಸುತ್ತಲೂ ಮುತ್ತಿಗೆ ಹಾಕಿ ದಾಳಿಗೆ ಕಾರಣವಾದ ಉಗ್ರಗಾಮಿಗಳನ್ನು ಪತ್ತೆಹಚ್ಚಲು ಭಾರಿ ಶೋಧಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಕಣಿವೆಯಲ್ಲಿ ಮುಂದುವರೆದ ಪ್ರತಿಭಟನೆ
ಇನ್ನು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಸಮುದಾಯದವರು ಮತ್ತು ಅವರ ಕುಟುಂಬದವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಜಮ್ಮುವಿನಲ್ಲಿ ಪ್ರತಿಭಟನೆ ಮುಂದುವರೆಸಲಾಗಿದೆ. ಮಂಗಳವಾರ ಕುಲ್ಗಾಮ್ನ ಸರ್ಕಾರಿ ಪ್ರೌಢಶಾಲೆ ಗೋಪಾಲ್ಪೋರಾ ಪ್ರದೇಶದ ಆವರಣದಲ್ಲಿ ಹಿಂದೂ ಮಹಿಳಾ ಶಿಕ್ಷಕಿ ರಜನಿ ಬಾಲಾ ಸಾಂಬಾ ಅವರನ್ನು ಉಗ್ರರು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಈ ಉದ್ದೇಶಿತ ದಾಳಿ ನಡೆದಿದೆ. ಮೇ ತಿಂಗಳಲ್ಲಿ ಕಣಿವೆಯಲ್ಲಿ ಮೂವರು ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಮತ್ತು ಮೂವರು ಕರ್ತವ್ಯ ನಿರತ ಪೊಲೀಸರು ಸೇರಿದಂತೆ ಏಳು ಉದ್ದೇಶಿತ ಹತ್ಯೆಗಳು ನಡೆದಿವೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: ಕುಲ್ಗಾಮ್ನಲ್ಲಿ ಶಿಕ್ಷಕಿಯ ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು
ಉಗ್ರಗಾಮಿಗಳ ಉದ್ದೇಶಿತ ಹತ್ಯೆಗಳು ಕಣಿವೆಯಲ್ಲಿ ನಿಯೋಜಿಸಲಾದ ವಲಸಿಗ ಕಾಶ್ಮೀರಿ ಪಂಡಿತರು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಲ್ಲಿ ಭೀತಿಯನ್ನು ಉಂಟುಮಾಡಿದೆ. ಅವರು ಕಾಶ್ಮೀರದ ಹೊರಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.