
ಹತ್ಯೆ (ಸಂಗ್ರಹ ಚಿತ್ರ)
ಮುಂಬೈ: ಅಳುತ್ತಿವೆ ಎಂಬ ಒಂದೇ ಕಾರಣಕ್ಕೆ ಮಹಾತಾಯಿಯೊಬ್ಬಳು ತನ್ನದೇ ಹಸುಗೂಸು ಮತ್ತು ಪುಟ್ಟ ಗಂಡುಮಗುವನ್ನು ಕೊಂದು ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹಳ್ಳಿಯೊಂದರ ಹೊಲವೊಂದರಲ್ಲಿ 30 ವರ್ಷದ ಮಹಿಳೆ ತನ್ನ ಹೆಣ್ಣು ಹಸಗೂಸು ಮತ್ತು ಎರಡು ವರ್ಷದ ಮಗನನ್ನು ನಿರಂತರವಾಗಿ ಅಳುತ್ತಿದ್ದಕ್ಕಾಗಿ ಕೊಂದು ನಂತರ ದೇಹಗಳನ್ನು ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು ವೈದ್ಯೆ ಹತ್ಯೆ: ಈ ಕೊಲೆ ಆರೋಪಿ ಒಂದು ಕಾಲದ ಲಾರಿ ಕ್ಲೀನರ್, ಈಗ 350 ಕೋಟಿ ರೂ ಆಸ್ತಿ ಒಡೆಯ!!
ಆರೋಪಿ ಮಹಿಳೆ ಧುರ್ಪಾದಾಬಾಯಿ ಗಣಪತ್ ನಿಮಲ್ವಾಡ್ ಎಂದು ಗುರುತಿಸಲಾಗಿದ್ದು, ಮಕ್ಕಳ ಶವಗಳನ್ನು ವಿಲೇವಾರಿ ಮಾಡಲು ನೆರವು ನೀಡಿದ ಆರೋಪದ ಮೇರೆಗೆ ಪೊಲೀಸರು ಗುರುವಾರ ಆಕೆಯ ತಾಯಿ ಮತ್ತು ಸಹೋದರನನ್ನು ಕೂಡ ಬಂಧಿಸಿದ್ದಾರೆ ಎಂದು ಭೋಕರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಂದೇಡ್ ಜಿಲ್ಲೆಯ ಭೋಕರ್ ತಾಲೂಕಿನ ಪಾಂಡುರ್ನಾ ಗ್ರಾಮದಲ್ಲಿ ಸತತ ಎರಡು ದಿನ - ಮೇ 31 ಮತ್ತು ಜೂನ್ 1 ರಂದು ಈ ಹತ್ಯೆಗಳು ನಡೆದಿವೆ. ಮೇ 31 ರಂದು ಧುರ್ಪಾದಾಬಾಯಿ ತನ್ನ ನಾಲ್ಕು ತಿಂಗಳ ಮಗಳು ಅನುಸೂಯಾಳ ನಿರಂತರ ಅಳುವಿನಿಂದ ಬೇಸತ್ತು ಕತ್ತು ಹಿಸುಕಿದ್ದಾಳೆ. ಮರುದಿನ, ಆಹಾರ ಕೇಳಲು ಅಳುತ್ತಿದ್ದ ಎಂಬ ಕಾರಣಕ್ಕೆ ತನ್ನ ಮಗ ದತ್ತನನ್ನು ಅದೇ ರೀತಿಯಲ್ಲಿ ಕೊಂದು ಹಾಕಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಮಹಿಳೆ ಬುಧವಾರ ಮುಖೇಡ್ ತಾಲೂಕಿನ ನಿವಾಸಿಗಳಾದ ತನ್ನ ತಾಯಿ ಕೊಂಡಬಾಯಿ ರಾಜೇಮೋದ್ ಮತ್ತು ಸಹೋದರ ಮಾಧವ್ ರಾಜೇಮೋದ್ ಅವರ ಸಹಾಯದಿಂದ ಹೊಲದಲ್ಲಿ ಅವರ ದೇಹವನ್ನು ಸುಟ್ಟು ಹಾಕಿದ್ದಳು, ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಎಲ್ಲ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.