ಗಾಯಕನೊಂದಿಗೆ ದ್ವೇಷವಿತ್ತು, ಸಿಧು ಮೂಸೆವಾಲಾ ಹತ್ಯೆಯಲ್ಲಿ ನನ್ನ ಗ್ಯಾಂಗ್ ಪಾತ್ರವಿದೆ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್
ಕೆನಡಾ ಮೂಲದ ಗೋಲ್ಡಿ ಬ್ರಾರ್ ಹಾಗೂ ನನ್ನ ಗ್ಯಾಂಗ್'ನ ಸದಸ್ಯರು ಸಂಚು ರೂಪಿಸಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ್ದಾರೆಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆಂದು ತಿಳಿದುಬಂದಿದೆ.
Published: 03rd June 2022 01:25 PM | Last Updated: 03rd June 2022 01:34 PM | A+A A-

ಸಿಧು ಮೂಸೆವಾಲಾ
ನವದೆಹಲಿ: ಕೆನಡಾ ಮೂಲದ ಗೋಲ್ಡಿ ಬ್ರಾರ್ ಹಾಗೂ ನನ್ನ ಗ್ಯಾಂಗ್'ನ ಸದಸ್ಯರು ಸಂಚು ರೂಪಿಸಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ್ದಾರೆಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆಂದು ತಿಳಿದುಬಂದಿದೆ.
ಕಳೆದ ವರ್ಷ ಆಗಸ್ಟ್ 7 ರಂದು ಅಕಾಲಿದಳದ ಯುವ ನಾಯಕ ವಿಕ್ರಮ್ಜಿತ್ ಸಿಂಗ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಹತ್ಯೆಯಲ್ಲಿ ಸಿಧು ಮೂಸೆವಾಲಾ ಭಾಗಿಯಾಗಿದ್ದ. ಈ ಹತ್ಯೆ ಬಳಿಕ ಸಿಧು ಮೂಸೆವಾಲಾ ಹಾಗೂ ನಮ್ಮ ಗ್ಯಾಂಗ್ ನಡುವೆ ವೈರತ್ವ ಬೆಳೆದಿದ್ದು, ಇದರಿಂದಲೇ ಆತನನ್ನು ಹತ್ಯೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರ ವಶದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾನೆಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಮೃತ ಗಾಯಕನ ಮನೆಗೆ ಪಂಜಾಬ್ ಸಿಎಂ ಭಗವಂತ್ ಮನ್ ಭೇಟಿ, ಗ್ರಾಮಸ್ಥರಿಂದ ಪ್ರತಿಭಟನೆ
ಬಿಷ್ಣೋಯ್ ತನಿಖೆಗೆ ಅಸಹಕಾರ ತೋರುತ್ತಿದ್ದು, ಹತ್ಯೆಗೆ ಕಾರಣರಾಗಿರುವ ನಿಜವಾರ ಸಂಚುಕೋರರು ಹಾಗೂ ತನ್ನ ಗ್ಯಾಂಗ್'ನ ಸದಸ್ಯರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಆದರೆ, ಮೂಸೆವಾಲಾ ಜೊತೆಗೆ ವೈರತ್ವ ಇರುವುದು ಹಾಗೂ ಹತ್ಯೆಯಲ್ಲಿ ತನ್ನ ಗ್ಯಾಂಗ್ ಸದಸ್ಯರ ಕೈವಾಡವಿರುವುದಾಗಿ ಒಪ್ಪಿಕೊಂಡಿದ್ದಾನೆಂದು ತನಿಖಾಧಿಕಾರಿಗಳು ಹೇಳಿದ್ದಾರೆ.
"ಮೂಸೆವಾಲಾ ಹತ್ಯೆಗೆ ಸಂಚು ರೂಪಿಸಿದ ಮತ್ತು ಅದನ್ನು ಕಾರ್ಯಗತಗೊಳಿಸಿದ ಗ್ಯಾಂಗ್ ಸದಸ್ಯರಲ್ಲಿ ಕೆನಡಾ ಮೂಲದ ಗೋಲ್ಡಿ ಬ್ರಾರ್ ಕೈವಾಡ ಇರುವುದಾಗಿಯೂ ಆತ ಹೇಳಿದ್ದಾನೆ. ಆದರೆ, ಗ್ಯಾಂಗ್ ಸದಸ್ಯರ ಹೆಸರನ್ನು ಮಾತ್ರ ಆತ ಬಾಯಿಬಿಡುತ್ತಿಲ್ಲ. ಹತ್ಯೆಯ ಹಿಂದಿರುವ ಪ್ರಮುಖ ಕಾರಣವನ್ನೂ ಆತ ತಿಳಿಸುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೂಸೆವಾಲಾ ಹತ್ಯೆಯಾಗುತ್ತಿದ್ದಂತೆಯೇ ತಿಹಾರ್ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ದೆಹಲಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದ. ತನನ್ನು ಪಂಜಾಬ್ ಪೊಲೀಸರ ವಶಕ್ಕೆ ನೀಡದಂತೆ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿಕೊಂಡಿದ್ದ. ಈ ಅರ್ಜಿಯು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ದೇಹ ಹೊಕ್ಕಿದ್ದವು 19 ಗುಂಡುಗಳು: ಮರಣೋತ್ತರ ಪರೀಕ್ಷಾ ವರದಿ
ಇದೇ ವೇಳೆ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆರೋಪಿಗಳು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಮಗೆ ಶಸ್ತ್ರಾಸ್ತ್ರಗಳ ಪೂರೈಸಿರುವುದಾಗಿ ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ನಡುವೆ ಗ್ಯಾಂಗ್‌ಸ್ಟರ್ ಕಲಾ ಜಥೇಡಿ ಮತ್ತು ಆತನ ಸಹಚರ ಕಲಾ ರಾಣಾ ಕೂಡ ವಿವಿಧ ಪ್ರಕರಣಗಳ ಅಡಿಯಲ್ಲಿ ಜೈಲು ವಾಸ ಅನುಭವಿಸುತ್ತಿದ್ದು, ಈ ಇಬ್ಬರನ್ನೂ ಕೂಡ ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿರುದ್ಧ ಸುಮಾರು 60 ಪ್ರಕರಣಗಳಿದ್ದು, ಪ್ರಸ್ತುತ ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಪಂಜಾಬ್ ಪೊಲೀಸರಿಂದ ಮೊದಲ ಬಂಧನ
ತಿಹಾರ್ ಜೈಲಿನಲ್ಲಿ ಬಿಷ್ಣೋಯ್ ಅವರನ್ನು ವಿಚಾರಣೆ ನಡೆಸಿದ ನಂತರ, ಅಧಿಕಾರಿಗಳು ಆತನನ್ನು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯವು ಆತನನ್ನು ಮೂರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ ಎಂದು ವರದಿಗಳು ತಿಳಿಸಿವೆ.